ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಖಾಸಗಿ ಬಸ್ ನಿಲ್ದಾಣ, ಡಿವೈಎಸ್ಪಿ ಕಚೇರಿ ಬಳಿ ಸರ್ಕಾರದ ವತಿಯಿಂದ ಹೈಟೆಕ್ ಶೌಚಾಲಯಗಳನ್ನು ಸಾರ್ವಜನಿಕರ ಒತ್ತಾಯದ ಮೇರೆಗೆ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶರಾದ ವಿಜಯ್ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.
ಪೌರಾಯುಕ್ತರ ಎಚ್.ಜಿ.ಜಗರೆಡ್ಡಿ ಈ ಸಂದರ್ಭದಲ್ಲಿ ನ್ಯಾಯಾಧೀಶರಿಗೆ ಶೌಚಾಲಯದ ರೂಪುರೇಷೆ ಹಾಗೂ ಇನ್ನಿತರೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸ್ಥಳ ಪರಿಶೀಲನೆ ನಂತರ ಜಿಲ್ಲಾಧಿಕಾರಿಗಳ ಅನುಮತಿ ಪಡೆದ ಶೌಚಾಲಯ ಕಾಮಗಾರಿ ಆರಂಭವಾಗಲಿದೆ. ಟೆಂಡರ್ ಮೂಲಕವೇ ಕಾಮಗಾರಿ ಕೈಗೊಳ್ಳಲಾಗುವುದು. ಕಳೆದ ಸುಮಾರು ಎರಡು ವರ್ಷಗಳಿಂದ ಸಾರ್ವಜನಿಕರು ಹೈಟೇಕ್ ಶೌಚಾಲಯ ನಿರ್ಮಾಣ ಮಾಡುವಂತೆ ನಗರಸಭೆ ಆಡಳಿತದ ಮೇಲೆ ಒತ್ತಡ ಹೇರುತ್ತಿದ್ದರು. ನಗರಸಭೆಯ ಪೂರ್ವಬಾವಿ ಬಜೆಟ್ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಿದ್ದರು ಎಂದು ತಿಳಿಸಿದರು.
ಪೌರಾಯುಕ್ತರಿಂದ ಮಾಹಿತಿ ಪಡೆದ ನ್ಯಾಯಾಧೀಶರು, ಈಗ ಪರಿಶೀಲಿಸಿರುವ ಎರಡೂ ಜಾಗಗಳು ಸಾರ್ವಜನಿಕರ ಹಿತದೃಷ್ಠಿಯಿಂದ ಅನುಕೂಲವಾಗಿದ್ದು ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಎಇಇ ಕೆ.ವಿಜಯ್, ವ್ಯವಸ್ಥಾಪಕ ಲಿಂಗರಾಜು, ಕಂದಾಯಾಧಿಕಾರಿ ಸತೀಶ್, ಹಿರಿಯ ಆರೋಗ್ಯ ನಿರೀಕ್ಷಕ ಗಣೇಶ್, ಮಹಲಿಂಗಪ್ಪ ಮುಂತಾದವರು ಇದ್ದರು.