ಭ್ರಷ್ಟ ಅಧಿಕಾರಿಗಳ ಕಚೇರಿ ಮನೆಗಳ ಮೇಲೆ ಲೋಕಾಯುಕ್ತ ದಾಳಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ರಾಜ್ಯದ 7 ಜಿಲ್ಲೆಗಳ ಭ್ರಷ್ಟ ಅಧಿಕಾರಿಗಳ ಕಚೇರಿ, ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ ಏಳು ಮಂದಿ ಸರ್ಕಾರಿ ನೌಕರರ ನಿವಾಸ ಸೇರಿದಂತೆ ಏಕಕಾಲದಲ್ಲಿ
27 ಕಡೆಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಸಂಬಂಧ ಪರಿಶೀಲನೆ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಚರ- ಸ್ಥಿರಾಸ್ತಿ, ಚಿನ್ನಾಭರಣ ಹಾಗೂ ನಗದನ್ನ ಪತ್ತೆ ಹಚ್ಚಿದ್ದಾರೆ.

ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಭ್ರಷ್ಟ ಅಧಿಕಾರಿಗಳ ಬಳಿ ನಿವೇಶನ, ಜಮೀನು, ಚಿನ್ನಾಭರಣ, ನಗದು, ಬೆಲೆಬಾಳುವ ವಾಹನಗಳನ್ನ ಪತ್ತೆ ಹಚ್ಚಲಾಗಿದ್ದು, ಇದರ ಮೌಲ್ಯ 18.45 ಕೋಟಿ ರೂಪಾಯಿಯಷ್ಟಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಏಳು ಮಂದಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಲೋಕಾಯುಕ್ತರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಆರೋಪಿತ ಅಧಿಕಾರಿಗಳ ವಿವರ-
ಬೆಂಗಳೂರಿನ ಬಿಬಿಎಂಪಿ ಹೆಬ್ಬಾಳ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಾಧವ್ ರಾವ್ ಮನೆ, ಕಚೇರಿ ಸೇರಿದಂತೆ ಐದು ಕಡೆಗಳಲ್ಲಿ ದಾಳಿ ನಡೆಸಿ ಒಟ್ಟು
7 ನಿವೇಶನಗಳು, 2 ವಾಸದ ಮನೆಗಳು, 48.27 ಎಕರೆ ಕೃಷಿ ಜಮೀನು, 55 ಲಕ್ಷ ಬೆಳೆಬಾಳುವ ಚಿನ್ನಾಭರಣ, ಸೇರಿದಂತೆ ಒಟ್ಟು 8.57 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಪತ್ತೆ ಹಚ್ಚಿದ್ದಾರೆ.

ಚಿತ್ರದುರ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಕೆ. ಸಿ ಶಶಿಧರ್​ಗೆ ಸೇರಿದ ನಾಲ್ಕು ಕಡೆಗಳಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಶೋಧದ ವೇಳೆ 1.21 ಕೋಟಿ ಮೌಲ್ಯದ ಒಂದು ನಿವೇಶನ, ಒಂದು ವಾಸದ ಮನೆ, 9.14 ಎಕರೆ ಕೃಷಿ ಜಮೀನು ಹಾಗೂ 21.66 ಲಕ್ಷ ಮೌಲ್ಯದ ಆಭರಣ ಹಾಗೂ 34.81 ಲಕ್ಷ ಮೌಲ್ಯದ ವಾಹನ ಸೇರಿದಂತೆ ಒಟ್ಟು 1.78 ಕೋಟಿ ಚರ ಹಾಗೂ ಸ್ಥಿರಾಸ್ತಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿಯ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಎಫ್​ಡಿಎ ಆಗಿರುವ ಸಚಿನ್ ಬಸವಂತ್ ಮಂಡೆಡ್ ಮನೆ ಸೇರಿದಂತೆ ಐದು ಕಡೆಗಳಲ್ಲಿ ದಾಳಿ ನಡೆಸಿ 58 ಲಕ್ಷ ಮೌಲ್ಯದ ನಿವೇಶನ ಹಾಗೂ ವಾಸದ ಮನೆ, 1.12 ಎಕರೆ ಕೃಷಿ ಜಮೀನು, 1.92 ಲಕ್ಷ ಕೋಟಿ ಮೌಲ್ಯದ ಚಿನ್ನಾಭರಣ, ಬ್ಯಾಂಕ್ ಖಾತೆಯಲ್ಲಿ ಉಳಿತಾಯ ಹಾಗೂ ಮ್ಯೂಚುವಲ್ ಫಂಡ್ ಹಾಗೂ ಈಕ್ವಿಟಿ ಶೇರ್​ನಲ್ಲಿದ್ದ ಹಣ ಸೇರಿ ಒಟ್ಟಾರೆ 2.50 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗಾವಿಯ ರಾಯಬಾಗ್ ಪಶು ಆಸ್ಪತ್ರೆಯ ಪಶು ನಿರೀಕ್ಷಕ ಸಂಜಯ್ ಅಣ್ಣಪ್ಪ ದುರ್ಗಣ್ಣನವರ್ ಮನೆ ಸೇರಿ 3 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ 4 ನಿವೇಶನಗಳು, 1 ವಾಸದ ಮನೆ, 1 ಎಕರೆ ಕೃಷಿ ಜಮೀನು, 4.50 ಲಕ್ಷ ವಾಹನ, 9,92,324 ಲಕ್ಷ ಮೌಲ್ಯದ ಚಿನ್ನಾಭರಣ, 8.86 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಒಟ್ಟು 74 ಲಕ್ಷದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಹಚ್ಚಿದ್ದಾರೆ.

ಬಾಗಲಕೋಟೆಯ ಬಾದಾಮಿ ತಾಲೂಕಿನ ಹುಲಗೇರಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶಿವಲಿಂಗಯ್ಯ ಪಂಚಾಕ್ಷರಯ್ಯ ಹಿರೇಮಠ ಮನೆ ಸೇರಿದಂತೆ 3 ಕಡೆಗಳಲ್ಲಿ ದಾಳಿ ನಡೆಸಿ ಶೋಧಿಸಿದಾಗ 1 ನಿವೇಶನ, ಒಂದು ವಾಸದ ಮನೆ, 1.97 ಲಕ್ಷ ನಗದು, 14.28 ಲಕ್ಷ ಚಿನ್ನಾಭರಣ ಹಾಗೂ 8.50 ಲಕ್ಷ ಬೆಲೆಬಾಳುವ ವಾಹನಗಳು ಸೇರಿದಂತೆ ಒಟ್ಟು 1.43 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಮಾಡಲಾಗಿದೆ ಎಂದು ಲೋಕಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಯಚೂರಿನ ಜಿಲ್ಲಾ ಪಂಚಾಯತ್ ಕಚೇರಿಯ ಸಹಾಯಕ ಲೆಕ್ಕಾಧಿಕಾರಿ ಆಗಿ ಕೆಲಸ ಮಾಡುತ್ತಿರುವ ನರಸಿಂಗ ರಾವ್ ಗುಜ್ಜಾರ್ ಮನೆಗಳ ಮೇಲೆ ದಾಳಿ ನಡೆಸಿದ ವೇಳೆ 5 ನಿವೇಶನಗಳ ದಾಖಲಾತಿ, 2 ವಾಸದ ಮನೆಗಳು, 40.40 ಲಕ್ಷ ಮೌಲ್ಯದ ಚಿನ್ನಾಭರಣ, ಬೆಲೆಬಾಳುವ ವಾಹನ ಸೇರಿದಂತೆ ಒಟ್ಟು 1.20 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";