ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಹಲವು ಕಡೆ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತರು ದಾಳಿ ಮಾಡಿ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.
ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ವರು ಅಧಿಕಾರಿಗಳಿಗೆ ಸೇರಿದ 24 ಕಡೆ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಒಟ್ಟು 26.55 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ-1, ಕೋಲಾರ-1, ದಾವಣಗೆರೆ-1 ಮತ್ತು ಯಾದಗಿರಿ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ-1 ಸೇರಿ ಒಟ್ಟು 4 ಸರ್ಕಾರಿ ಅಧಿಕಾರಿಗಳು ತಮ್ಮ ಮೂಲ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿತ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 24 ಸ್ಥಳಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತರು ಗುರುವಾರ ದಾಲಿ ಮಾಡಿದ್ದರು.
26.55 ಕೋಟಿ ರೂ. ಅಕ್ರಮ ಆಸ್ತಿಗಲ ಪೈಕಿ 21.30 ಕೋಟಿ ರೂ. ಮೌಲ್ಯದ ನಿವೇಶನಗಳು, 1.85 ಕೋಟಿ ರೂ.ಚಿನ್ನಾಭರಣ ಹಾಗೂ 1.84 ಕೋಟಿ ರೂ. ಮೌಲ್ಯದ ವಾಹನಗಳಾಗಿವೆ. ಇನ್ನು 17.42 ಲಕ್ಷ ರೂ. ನಗದು ಹಣ ಪತ್ತೆಯಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
ಆಸ್ತಿ ವಿವರ: ಬಿಬಿಎಂಪಿಯ ಕಾರ್ಯಪಾಲಕ ಅಭಿಯಂತರ ಜಿ.ಶ್ರೀನಿವಾಸಮೂರ್ತಿಗೆ ಸೇರಿದ 9 ಸ್ಥಳಗಳಲ್ಲಿ ಶೋಧ ಕಾರ್ಯ ಮಾಡಿ 4 ನಿವೇಶನಗಳು, 6 ವಾಸದ ಮನೆಗಳು, 10 ಲಕ್ಷ ರೂ. ನಗದು, 72 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳು, 13.70 ಲಕ್ಷ ಬೆಲೆ ಬಾಳುವ ವಾಹನಗಳು ಪತ್ತೆ ಮಾಡಿ ದೂರು ದಾಖಲು ಮಾಡಿಕೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪ ನಾಯಕರಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ ಕಾರ್ಯ ಮಾಡಿ 11 ನಿವೇಶನ, 2 ವಾಸದ ಮನೆಗಳು, 13 ಎಕರೆ ಕೃಷಿ ಜಮೀನು, 1 ಪೆಟ್ರೋಲ್ ಬಂಕ್, 1 ನರ್ಸಿಂಗ್ ಹೋಂ, 1 ಲಾಡ್ಜ್ ಮತ್ತು ಬಾರ್, 4,10,860 ರೂ. ನಗದು, 60 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, 70 ಲಕ್ಷ ರೂ. ಬೆಲೆಬಾಳುವ ವಾಹನಗಳು, 20 ಲಕ್ಷ ರೂ. ಬೆಲೆಬಾಳುವ ಇತರೆ ಮತ್ತು ಗೃಹೋಪಯೋಗಿ ವಸ್ತುಗಳು ಪತ್ತೆ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ.
ಕೋಲಾರದ ಎಡಿಎಲ್‌ಆರ್ ಕಚೇರಿಯ ಸರ್ವೆ ಸೂಪರ್ ವೈಸರ್ ಸುರೇಶ್ ಬಾಬು ಜಿ. ಇವರಿಗೆ ಸೇರಿದ 6 ಸ್ಥಳಗಳಲ್ಲಿ ಶೋಧ ಮಾಡಿ 3 ನಿವೇಶನ, 5 ವಾಸದ ಮನೆ, 5 ಎಕರೆ ಕೃಷಿ ಜಮೀನು 3 ಲಕ್ಷ ರೂ. ನಗದು, 18.24 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 80 ಲಕ್ಷ ರೂ. ಬೆಲೆ ಬಾಳುವ ವಾಹನಗಳು, 66.87 ಲಕ್ಷ ರೂ. ಮೌಲ್ಯದ ಇತರೆ ಗೃಹೋಪಯೋಗಿ ವಸ್ತುಗಳು ಪತ್ತೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ದಾವಣಗೆರೆಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಬಿ.ರವಿಗೆ ಸೇರಿದ 4 ಸ್ಥಳಗಳಲ್ಲಿ ಶೋಧ ಕಾರ್ಯ ಮಾಡಿ 4 ನಿವೇಶನ, 2 ವಾಸದ ಮನೆಗಳು, 31,500 ರೂ. ನಗದು, 35.72 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳು, 20.77 ಲಕ್ಷ ರೂ. ಮೌಲ್ಯದ ವಾಹನಗಳು, 50 ಲಕ್ಷ ರೂ. ಇತರೆ ಮತ್ತು ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ ಮಾಡಿ ಲೋಕಾಯುಕ್ತರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.