ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕರ ಮನೆ, ತೋಟ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರ ಅಕ್ರಮ ಆಸ್ತಿ ಪ್ರಕರಣದ ಹಿನ್ನೆಲೆಯಲ್ಲಿ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ಹಾಸನದ ಲೋಕಾಯುಕ್ತ ಎಸ್‌ಪಿ ಸ್ನೇಹಾ ಅವರ ನೇತೃತ್ವದಲ್ಲಿ ಲೋಕಾಯುಕ್ತ ತಂಡವು ಬೆಂಗಳೂರಿನ ಹೊಸಮನೆ, ಚಿಕ್ಕಮಗಳೂರಿನ ಬಸಾಪುರ ಹಾಗೂ ಹಲಸೂರು ತೋಟದ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

- Advertisement - 

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಶಾಸಕ ಟಿ.ಡಿ. ರಾಜೇಗೌಡ, ಪತ್ನಿ ಪುಷ್ಪಾ ಹಾಗೂ ವಿದೇಶದಲ್ಲಿರುವ ಪುತ್ರನ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ಮೂವರ ವಿರುದ್ಧವೂ ವಿಚಾರಣೆ, ತನಿಖೆ ಪ್ರಕ್ರಿಯೆ ಮುಂದುವರೆದಿದೆ.

ನಾಲ್ಕು ವಾಹನಗಳಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು ಮನೆ, ಕಚೇರಿ ಹಾಗೂ ತೋಟದಲ್ಲಿ ನಿಖರ ಶೋಧ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ಮುಂದುವರೆಸಿದ್ದಾರೆ.

- Advertisement - 

ರಾಜೇಗೌಡರ ಅಕ್ರಮ ಆಸ್ತಿ ಗಳಿಕೆ ಪ್ರಕರಣ?
ಶಾಸಕ ರಾಜೇಗೌಡ ಅವರು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಹಲಸೂರಲ್ಲಿ
266 ಎಕರೆ ಉದ್ಯಮಿ, ದಿವಂಗತ ಸಿದ್ಧಾರ್ಥ್​ಗೆ ಸೇರಿದ್ದ ತೋಟ ಖರೀದಿಸಿದ್ದರು.

ಈ ವಹಿವಾಟಿನ ಸಂಬಂಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿತ್ತು. ಸ್ಥಳೀಯ ಬಿಜೆಪಿ ಮುಖಂಡ ದಿನೇಶ್ ಎಂಬವರು ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದರು.

ಕಳೆದ ವಿಧಾನಸಭಾ ಚುನಾವಣೆ ವೇಳೆ ಶಾಸಕರು ಸಲ್ಲಿಸಿದ್ದ ಪ್ರಮಾಣದಲ್ಲಿನ ಆಸ್ತಿಪಾಸ್ತಿಗೂ ದಾಖಲೆಗಳಿಗೂ ಭೂಮಿ ಖರೀದಿ ವಹಿವಾಟಿಗೂ ತಾಳೆಯಾಗುತ್ತಿಲ್ಲ. ಶಾಸಕರ ವಾರ್ಷಿಕ ಆದಾಯವೇ 38 ಲಕ್ಷ ರೂಪಾಯಿ ಎಂದು ಅಫಿಡವಿಟ್​​ನಲ್ಲಿ ತಿಳಿಸಿದ್ದರು, ಇದು ನಿಜವಾದರೆ ನೂರಾರು ಕೋಟಿ ರೂ. ಬೆಲೆಬಾಳುವ ಭೂಮಿ ಖರೀದಿ ಹೇಗೆ ಸಾಧ್ಯ ಎಂದು ದಿನೇಶ್ ಪ್ರಶ್ನಿಸಿದ್ದರು.

ಬೆಲೆ ಬಾಳುವ ಭೂಮಿಯನ್ನು ಕಡಿಮೆ ಬೆಲೆಗೆ ಅಕ್ರಮವಾಗಿ ಖರೀದಿಸಿದ ಆರೋಪ ಸಂಬಂಧ ರಾಜೇಗೌಡರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಎರಡು ವಾರಗಳ ಹಿಂದೆ ಆದೇಶ ನೀಡಿತ್ತು. ಅದರಂತೆ ಎಫ್​ಐಆರ್ ದಾಖಲಿಸಿಕೊಂಡು ಲೋಕಾಯುಕ್ತರು ದಾಳಿ ಮಾಡಿದ್ದಾರೆ ಎನ್ನಲಾಗಿದೆ.

 

Share This Article
error: Content is protected !!
";