ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ತಾಲೂಕು ಕಚೇರಿಯಲ್ಲಿನ ಉಪನೋಂದಣಾಧಿಕಾರಿ ಕಚೇರಿಯ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಂದಾಯ ಇಲಾಖೆಯಲ್ಲಿ ಆನ್‌ಲೈನ್ ವ್ಯವಸ್ಥೆ ಮಾಡಲಾಗಿರುವುದರಿಂದ ಭ್ರಷ್ಟಾಚಾರ ಕಡಿಮೆಯಾಗಿರಬಹುದು ಎಂದು ಪರಿಶೀಲನೆ ಮಾಡುವುದಕ್ಕೆ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಂದಾಯ ಇಲಾಖೆ ಸಂಬಂಧಿಸಿದ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದು ಉಪಲೋಕಾಯುಕ್ತ ಫಣೀಂದ್ರ ಅವರು ಹೇಳಿದರು.
ನಂತರ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಗೂಸಹ ಭೇಟಿ ನೀಡಿ ಪರಿಶೀಲಿಸಿದಾಗ ಅಧಿಕಾರಿಗಳ ಹಾಜರಾತಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಆಗುತ್ತಿಲ್ಲ, ಆಧಿಕಾರಿಗಳ ವೈಯಕ್ತಿಕ ಹಣ ಬೆಳಗ್ಗೆ ಹಾಗೂ ಸಂಜೆ ವೇಳೆ ರಿಜಿಸ್ಟರ್ ಪುಸ್ತಕದಲ್ಲಿ ನಮೂದು ಆಗುತ್ತಿಲ್ಲ. ರೆಕಾರ್ಡ್ ರೂಮಿನ ಬೀಗ ತೆಗೆಯಲು ಸಿಬ್ಬಂದಿ ಪರದಾಡಿದರು.
ಇದಕ್ಕಾಗಿ ಅನುಮಾನಗೊಂಡು ನಮ್ಮ ಸಿಬ್ಬಂದಿಯನ್ನು ಕಚೇರಿಯಲ್ಲಿರಿಸಿ ಇನ್ನಷ್ಟು ಕಡತಗಳನ್ನು ಪರಿಶೀಲನೆ ನಡೆಸುವಂತೆ ತಾಕೀತು ಮಾಡಲಾಗಿದೆ. ಸಾರ್ವಜನಿಕರಿಂದಲೂ ಕೂಡ ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಜನರಿಗೆ ಅಧಿಕಾರಿಗಳಿಂದಾಗುವ ತೊಂದರೆಗಳ ಕುರಿತು ಸರ್ಕಾರ ಗಮನಕ್ಕೆ ತರಲಾಗುವುದು ಎಂದರು