ನಿವೃತ್ತ ನೌಕರರನ್ನು ತಾರಮ್ಯದಿಂದ ನೋಡಬೇಡಿ; ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ಹೆಗಡೆ 

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು;
ರಾಜ್ಯ ಸರ್ಕಾರದ 7 ನೇ ವೇತನ ಆಯೋಗದ ವರದಿಯಂತೆ ನಿವೃತ್ತ ಸರ್ಕಾರಿ ನೌಕರರಿಗೆ ಪಿಂಚಣಿಯಲ್ಲಿ ತಾರತಮ್ಯ ಸರಿಪಡಿಸುವುದು ಸೇರಿದಂತೆ ನಿವೃತ್ತ ನೌಕರರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ರಾಜ್ಯ ಸರ್ಕಾರ ಈಡೇರಿಸಬೇಕು. ನಿವೃತ್ತ ನೌಕರರನ್ನು ತಾರತಮ್ಯದಿಂದ ನೋಡುವುದು ಸರಿಯಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ಹೆಗ್ಡೆ ಹೇಳಿದ್ದಾರೆ.  

ನಗರದ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ಬೃಹತ್‌ಸಮಾವೇಶಕ್ಕೆ ಚಾಲನೆ  ನೀಡಿ ಮಾತನಾಡಿದ ಅವರು, ಸಂವಿಧಾನದ 14 ವಿಧಿಯಡಿ ತಾರತಮ್ಯವಿಲ್ಲದೇ ಆಡಳಿತ ನಡೆಸಬೇಕಾಗಿದ್ದು ಸರ್ಕಾರದ ಜವಾಬ್ದಾರಿ. ಪಿಂಚಣಿ ತಿರಸ್ಕರಿಸುವುದು, ಒಬ್ಬೊಬ್ಬರಿಗೆ ಒಂದೊಂದು ರೀತಿ ನಿಯಮ ಜಾರಿಗೆ ತರುವುದು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದರು.

ಸರ್ಕಾರದ ತಾರತಮ್ಯ ಧೋರಣೆ ವಿರುದ್ಧದ ಹೋರಾಟದಲ್ಲಿ ನಿಮ್ಮ ಜೊತೆ ಸೇರುತ್ತೇನೆ. ನಿವೃತ್ತರಾದ ನೀವು ಬೇಡಿಕೆಗಳ ಈಡೇರಿಕೆಗಾಗಿ ಸಧ್ಯಕ್ಕೆ ನ್ಯಾಯಾಲಯಕ್ಕೆ ಹೋಗುವುದು ಬೇಡ. ತೀರ್ಪು ವಿಳಂಬವಾಗುತ್ತದೆ. ರಚನಾತ್ಮಕ ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಸಂವಿಧಾನ ಸರ್ಕಾರಕ್ಕೆ ಬಹಳಷ್ಟು ಜವಾಬ್ದಾರಿ ನೀಡಿದೆ. ಇವುಗಳನ್ನು ಸರ್ಕಾರ ಪರಿಪಾಲಿಸಬೇಕು ಎಂದು ಹೇಳಿದರು.

ಸಂಘದ ರಾಜ್ಯ ಮಹಾಪ್ರಧಾನ ಸಂಚಾಲಕ ಎಂ.ಪಿ.ಎಂ. ಷಣ್ಮುಖಯ್ಯ ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಸರ್ಕಾರದ ಕೆಲಸವನ್ನು ಉತ್ತಮವಾಗಿ ನಿರ್ವಹಣೆ ಮಾಡಿ ನಿವೃತ್ತರಾದವರ ಬೇಡಿಕೆಗಳನ್ನು ಈಡೇರಿಸುವುದು ಆಡಳಿತಾರೂಢ ಸರ್ಕಾರಗಳ ಜವಾಬ್ದಾರಿಯಾಗಿದೆ. ನಿವೃತ್ತರಲ್ಲಿ ಶೇ 40 ಶಿಕ್ಷಕರು, ಶೇ 12 ಆರೋಗ್ಯ ಇಲಾಖಾ ನೌಕರರು, ಶೇ. 10 ಆರಕ್ಷಕ ಸಿಬ್ಬಂದಿ, ಉಳಿದ ಶೇಕಡಾ 38 ಭಾಗ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರತಿಬಾರಿ ವೇತನ ಆಯೋಗಗಳ ಪರಿಷ್ಕರಣೆ ಸಂದರ್ಭದಲ್ಲಿ ನಿವೃತ್ತರಿಗೆ ಅನ್ಯಾವಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆ ರಾಜ್ಯ ಸಂಚಾಲಕ ಅಶೋಕ ಎಂ. ಸಜ್ಜನ ಮಾತನಾಡಿ, 6 ನೇ ವೇತನ ಆಯೋಗದ ಸಂದರ್ಭದಲ್ಲಿಯೂ ಇದೇ ರೀತಿ ತಾರತಮ್ಯವಾಗಿತ್ತು. 7 ನೇ ವೇತನ ಆಯೋಗದ ಆದೇಶವನ್ನು ಪರಿಶೀಲಿಸಿ ಪರಿಷ್ಕೃತ ಆದೇಶ ಹೊರಡಿಸಿ ಆರ್ಥಿಕ ಸೌಲಭ್ಯ ನೀಡಬೇಕೆಂಬ ಹಕ್ಕೊತ್ತಾಯಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದರು.    

                  ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ,
ಸರ್ಕಾರಿ ನೌಕರರ ಸಂಘದ ಮಾಜಿ ಮತ್ತು ನಿವೃತ್ತ ನೌಕರರ ಸಂಘದ ಹಾಲಿ ರಾಜ್ಯಾಧ್ಯಕ್ಷ ಡಾ. ಎಲ್ ಭೈರಪ್ಪ ಮತ್ತಿತರರು ಉಪಸ್ಥಿತರಿದ್ದರು.

 

- Advertisement -  - Advertisement - 
Share This Article
error: Content is protected !!
";