ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಾಮಿ ಹೆಚ್.ಸಿ ಮಹಾದೇವಪ್ಪ ಅವರೇ, ತಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಅಣಬೆಗಳಂತೆ ತೆಲೆ ಎತ್ತುವ ಎಡಬಿಡಂಗಿ ಬುದ್ದಿಜೀವಿಗಳ ಅಧಿಕ ಪ್ರಸಂಗಿತನ ನೋಡಿ ನೋಡಿ ಕನ್ನಡಿಗರಿಗೆ ಸಾಕಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಬೇಸರ ವ್ಯಕ್ತಪಡಿಸಿದರು.
ಈಗ ಇನ್ನೊಂದು ಅನಾವಶ್ಯಕ ಚರ್ಚೆ ಹುಟ್ಟುಕಾಕುವ ಮೂಲಕ ತಾವು ಮತ್ತೊಬ್ಬ ಬುದ್ಧಿಜೀವಿ ಆಗಲು ಪ್ರಯತ್ನ ಪಡಬೇಡಿ. ಬುದ್ಧ, ಬಸವ, ಅಂಬೇಡ್ಕರರ ಹೆಸರು ಹೇಳಿಕೊಂಡು ರಾಜಕೀಯ ಮಾಡಿ ಅಧಿಕಾರ ಅನುಭವಿಸುವುದು ದೊಡ್ಡದಲ್ಲ. ಅಧಿಕಾರವಿದ್ದಾಗ ಆ ಮಹನೀಯರ ಹಾದಿಯಲ್ಲಿ ನಡೆದು ಪ್ರಾಮಾಣಿಕವಾಗಿ ಜನಸೇವೆ ಮಾಡುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅಶೋಕ್ ಕಿವಿ ಮಾತು ಹೇಳಿದರು.
ವಾಲ್ಮೀಕಿಯ ರಾಮನ ಬಗ್ಗೆ ಚರ್ಚೆ ಆಗುವುದಕ್ಕಿಂತ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ, ಅದರಿಂದ ವಾಲ್ಮೀಕಿ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ಆಗುವುದು ಉತ್ತಮ. ಅಲ್ಲವೇ ಮಹದೇವಪ್ಪನವರೇ? ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಕಳೆದರೂ ಕೆಲ ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಈಗಲೂ ಅದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.
ಸಚಿವ ಮಹಾದೇವಪ್ಪ ನವರೇ, ಹಿಂದೂಗಳ ಒಗ್ಗಟ್ಟು, ಹಿಂದೂಗಳ ಸಂಭ್ರಮ ಕಂಡರೆ ನಿಮಗೆ ಯಾಕಿಷ್ಟು ಅಸೂಯೆ? ಆದಿಕವಿ ಮಹರ್ಷಿ ವಾಲ್ಮೀಕಿಯ ಶ್ರೀರಾಮನೇ ಬೇರೆ, ಅಯೋಧ್ಯೆಯ ಶ್ರೀರಾಮನೇ ಬೇರೆ ಎಂದು ಹೇಳಿದ್ದೀರಲ್ಲ. ಹಾಗಾದರೆ ರಾಷ್ಟ್ರಕವಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ‘ ಕೃತಿಯಲ್ಲಿ ಬರುವ ರಾಮ ಯಾರು? ವಾಲ್ಮೀಕಿಯ ರಾಮನೋ ಅಥವಾ ಅಯೋಧ್ಯೆಯ ರಾಮನೋ? ಎಂದು ವಿಪಕ್ಷ ನಾಯಕರು ಪ್ರಶ್ನಿಸಿದರು.
ಹಿಂದೂಗಳ ಒಗ್ಗಟ್ಟನ್ನು ಒಡೆಯುವ, ಹಿಂದೂ ಸಮಾಜದಲ್ಲಿ ಒಡಕು ಮೂಡಿಸುವ ಈ ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ನವಭಾರತದಲ್ಲಿ ಜಾಗವಿಲ್ಲ. ಎಡಪಂಥೀಯ ವಿಚಾರಧಾರೆಯಿಂದ ಪ್ರಣೀತವಾದ ಇಂತಹ ಕಪೋಲಕಲ್ಪಿತ ಕಟ್ಟುಕಥೆಗಳನ್ನ, ವಿತಂಡವಾದವನ್ನ ನಂಬುವವರೂ ಇಲ್ಲ.
ನಿಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂಗಳ ಶ್ರದ್ಧೆ, ನಂಬಿಕೆಗಳ ಜೊತೆ ಚೆಲ್ಲಾಟವಾಡುವುದನ್ನ ಬಿಟ್ಟುಬಿಡಿ ಎಂದು ಅಶೋಕ್ ತಾಕೀತು ಮಾಡಿದ್ದಾರೆ.