ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಡವರಿಗೆ ಮನೆಗಳ ಹಂಚಿಕೆಯಲ್ಲಿ ನಿಯಮ ಪಾಲಿಸದೆ ಹಿಂಬಾಲಕರುಗಳಿಂದ ಪಟ್ಟಿ ತರಿಸಿಕೊಂಡು ಮನ ಬಂದಂತೆ ಮನೆಗಳನ್ನು ಹಂಚಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್.ಆಂಜನೇಯ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ವಿರುದ್ದ ಹರಿಹಾಯ್ದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಳಲ್ಕೆರೆ ತಾಲ್ಲೂಕಿನ ತಾಳ್ಯ, ತೇಕಲವಟ್ಟಿ, ಹೆಚ್.ಡಿ.ಪುರ, ಹಿರೇಎಮ್ಮಿಗನೂರು ಅರೆಹಳ್ಳಿ, ಶಿವಗಂಗ, ಗುಂಡೇರಿ, ಚಿಕ್ಕಜಾಜೂರು, ಆಡನೂರು, ಗುಂಜಿಗನೂರು, ಅಂದನೂರು, ರಾಮಗಿರಿ, ಎನ್.ಜಿ.ಹಳ್ಳಿ, ಶಿವಪುರ, ಮುತ್ತುಗದೂರು, ಚಿತ್ರಹಳ್ಳಿ, ಬಿ.ದುರ್ಗ ಗ್ರಾಮಗಳಲ್ಲಿನ ಬಡವರು, ಸೂರಿಲ್ಲದ ನಿರ್ಗತಿಕರನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡುವ ಬದಲು ಹಿಂಬಾಲಕರುಗಳಿಂದ ಪಟ್ಟಿ ತರಿಸಿಕೊಂಡಿರುವುದನ್ನು ಜಿಲ್ಲಾಧಿಕಾರಿಗಳು ಅನಮೋದಿಸಬಾರದೆಂದು ಹೆಚ್.ಆಂಜನೇಯ ಒತ್ತಾಯಿಸಿದರು.
ಭೋವಿ ಜನಾಂಗಕ್ಕೆ ಮುನ್ನೂರು ಮನೆ, ಲಿಂಗಾಯಿತರಿಗೆ ೨೦. ಸುಡುಗಾಡು ಸಿದ್ದರಿಗೆ ೧೬, ನಾಯಕ ಜನಾಂಗಕ್ಕೆ ೮, ಮಾದಿಗ ಸಮುದಾಯಕ್ಕೆ ಆರು, ಗೊಲ್ಲರಿಗೆ ಐದು ದೇವಾಂಗರಿಗೆ ೪, ಛಲವಾದಿಗಳಿಗೆ ೨, ಕೊರಚ ಜನಾಂಗದವರಿಗೆ ೧, ದರ್ಜಿಗೆ ೧, ಕಮ್ಮಾರ ಜನಾಂಗಕ್ಕೆ ಒಂದು ಮನೆ ವಿತರಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಹೆಚ್.ಆಂಜನೇಯ ರಸ್ತೆ ಮೇಲೆಯೇ ರಸ್ತೆಗಳನ್ನು ನಿರ್ಮಿಸುತ್ತಿರುವುದು ಸಾಕಾಗದೆ ಗಣಿ ಹಣ ಲೂಟಿ ಮಾಡಿ ಶಾಸಕ ಡಾ.ಎಂ.ಚಂದ್ರಪ್ಪ ಕೋಟ್ಯಾಧಿಪತಿಯಾಗುತ್ತಿದ್ದಾರೆ.
ಮನೆಗಳ ಹಂಚಿಕೆ ಮುನ್ನಾ ಗ್ರಾಮ ಸಭೆಗಳನ್ನು ನಡೆಸಬೇಕಿತ್ತು. ೩೩೫ ಮನೆಗಳ ಗುರಿಯಿದ್ದು, ೩೬೬ ಮನೆಗಳ ಪಟ್ಟಿ ಮಾಡಿ ಅನುಮೋದನೆಗೆ ಜಿಲ್ಲಾಧಿಕಾರಿಗೆ ಕಳಿಸಲಾಗಿದೆ. ಕಾನೂನು ಮೀರಿ ಮನೆಗಳನ್ನು ಹಂಚಿಕೆ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಹದಿನೇಳು ಗ್ರಾಮ ಪಂಚಾಯಿತಿಗಳ ಪಿ.ಡಿ.ಓ.ಗಳನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು. ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವಲ್ಲಿ ಅಧಿಕಾರಿಗಳು ನಿರ್ಲಕ್ಷೆ ವಹಿಸಿರುವುದು ಎದ್ದು ಕಾಣುತ್ತಿದೆ. ಜಿಲ್ಲಾಧಿಕಾರಿಗಳು ಮನೆಗಳ ಹಂಚಿಯಾಗಿರುವುದನ್ನು ಪರಿಶೀಲಿಸಬೇಕೆಂದು ಹೆಚ್.ಆಂಜನೇಯ ಮನವಿ ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಗ್ಯಾರೆಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ
ಆರ್.ಶಿವಣ್ಣ, ಮುದಸಿರ್ ನವಾಜ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ನ್ಯಾಯವಾದಿ ರವೀಂದ್ರ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.