ಸರ್ಕಾರಿ ಗುಡ್ಡಕ್ಕೆ ಶಾಸಕ ಎಂ.ಚಂದ್ರಪ್ಪ ಕನ್ನ; ಆಂಜನೇಯ ಗಂಭೀರ ಆರೋಪ 

News Desk

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ಕಾರಿ ಜಾಗ, ದಲಿತ ಭೂಮಿ ಕಬಳಕಿ ಮಾಡುತ್ತಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಗಳಿಸಿರುವ ಅಕ್ರಮ ಆಸ್ತಿ ಕುರಿತು ಸಮಗ್ರ ತನಿಖೆ ನಡೆಸುವಂತೆ ಮಾಜಿ ಸಚಿವ ಹೆಚ್.ಆಂಜನೇಯ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಳಲ್ಕೆರೆಯಲ್ಲಿ ಈ ಹಿಂದೆ ಸತ್ತವರ ಆಸ್ತಿ ಕಬಳಿಸಲು ನಡೆಸಿದ್ದ ಪ್ರಯತ್ನವನ್ನು ಬಹಿರಂಗಗೊಳಿಸುತ್ತಿದ್ದಂತೆ ಕದ್ದುಮುಚ್ಚಿ ಹೋಗಿ ಅವರಿಗೆ ಆಸ್ತಿಯನ್ನು ಮರು ನೋಂದಣಿ ಮಾಡಿಸಿಕೊಟ್ಟಿದ್ದ ಚಂದ್ರಪ್ಪ, ಈಗ ದಲಿತರ ಭೂಮಿ ಮೇಲೆ ಕೆಂಗಣ್ಣು ಹಾಕಿದ್ದಾರೆ ಎಂದು ದೂರಿದರು.

- Advertisement - 

ಕ್ಷೇತ್ರದಲ್ಲಿ ದಲಿತರ ಭೂಮಿಯನ್ನು ಬೇರೊಬ್ಬರ ಹೆಸರಿಗೆ ಮಾಡಿಸಿ, ಅದನ್ನು ತನ್ನ ಕುಟುಂಬದ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುವ ಷಡ್ಯಂತರ ನಿರಂತವಾಗಿ ನಡೆಯುತ್ತಿದೆ. ಈ ಕಾರ್ಯಕ್ಕೆ ಜಿಲ್ಲಾ, ತಾಲ್ಲೂಕು ಆಡಳಿತ ಬೆಂಬಲವಾಗಿ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಸಿ ಮೀಸಲಾತಿ ಸೌಲಭ್ಯದಡಿ ಜನಪ್ರತಿನಿಧಿ ಆಗಿರುವ, ಅನೇಕ ಸೌಲಭ್ಯ ಪಡೆದಿರುವ ಚಂದ್ರಪ್ಪ, ದಲಿತರ ಭೂಮಿ ಖರೀದಿಸಬಾರೆಂಬ ಸಾಮಾನ್ಯ ಪ್ರಜ್ಞೆ ಇಲ್ಲ. ಈ ಕಾರಣಕ್ಕೆ ಜಿಲ್ಲೆಯಲ್ಲಿ ಅನೇಕ ಬಡ, ದಲಿತರ ಭೂಮಿಯನ್ನು ತನ್ನ ಕುಟುಂಬದ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆದುಕೊಂಡು ಬಂದಿದೆ ಎಂದು ದೂರಿದರು.

- Advertisement - 

ಹೊಳಲ್ಕೆರೆ ಕ್ಷೇತ್ರದಲ್ಲಿ ಭೋವಿ, ಮಾದಿಗ ಸೇರಿ ಅನೇಕ ದಲಿತ ಕುಟುಂಬದ ಆಸ್ತಿ ಮೇಲೆ ಕಣ್ಣು ಹಾಕಿ, ಕಾನೂನು ಕುಣಿಕೆಗೆ ಸಿಲುಕದ ರೀತಿ ತನ್ನ ಕುಟುಂಬದ ಹೆಸರಿಗೆ ಮಾಡಿಸಿಕೊಳ್ಳುತ್ತಿರುವ ಚಂದ್ರಪ್ಪ, ಉಳುವವನೆ ಭೂ ಒಡೆಯ ಕಾಯ್ದೆ ವಿರುದ್ಧವಾಗಿದ್ದಾರೆ ಎಂದರು.

12 ಎಕರೆ ದಲಿತರ ಭೂಮಿಯನ್ನು ಅಕ್ರಮವಾಗಿ ನೋಂದಣಿ ಮಾಡಿಸಿಕೊಂಡಿರುವ ಚಂದ್ರಪ್ಪ ಕುಟುಂಬ, ಈಗ ಈ ಜಮೀನು ಪಕ್ಕದಲ್ಲಿರುವ 218 ಎಕರೆ ವಿಸ್ತೀರ್ಣದ ಬಹುದೊಡ್ಡ ಸರ್ಕಾರಿ ಗುಡ್ಡವನ್ನೇ ಕಬಳಿಸಲು ಮುಂದಾಗಿದೆ. ಈ ಗುಡ್ಡ ಖನಿಜ ಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡಿದ್ದು, ಈಗಾಗಲೇ ಈ ಪ್ರದೇಶದಲ್ಲಿ ಅಕ್ರಮವಾಗಿ ಮನೆ ಕಟ್ಟಲಾಗಿದೆ. ಜೊತೆಗೆ ಗುಡ್ಡವನ್ನೇ ಕರಗಿಸಲಾಗುತ್ತಿದೆ ಎಂದು ದೂರಿದರು.

ಉಳುವವನೆ ಭೂ ಒಡೆಯ, ದರಖಾಸ್ತ್ ಅಡಿ ಭೂಮಿ ಪಡೆದವರು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಹಕ್ಕುದಾರರಲ್ಲ. ಆದರೆ, ಚಂದ್ರಪ್ಪ, ಅಂತಹವರ ಜಮೀನನ್ನು ಮೊದಲಿಗೆ ಅನ್ಯ ಸಮುದಾಯದವರಿಗೆ ವರ್ಗಾಯಿಸಿ, ಬಳಿಕ ತನ್ನ ಕುಟುಂಬದ ಹೆಸರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ದಲಿತರಿಂದ ಭೂಮಿ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಂದ್ರಪ್ಪ ಅವರ ಈ ಅಕ್ರಮ ಕಾರ್ಯ ಗೊತ್ತಿದ್ದೂ ಏನೂ ಮಾತನಾಡದ ಸ್ಥಿತಿಗೆ ಜಿಲ್ಲಾ, ತಾಲ್ಲೂಕು ಆಡಳಿತದ ಅಧಿಕಾರಿಗಳು ತಲುಪಿದ್ದಾರೆ. ಒಂದು ವೇಳೆ ಪ್ರಶ್ನೀಸಿದರೆ ಅಧಿಕಾರಿಗಳ ವಿರುದ್ಧ ಕೆಡಿಪಿ ಸಭೆಯಲ್ಲಿ ತರಾಟೆಗೆ ತೆಗೆದುಕೊಳ್ಳುವ ಮೂಲಕ ಅವರನ್ನು ಕಟ್ಟಿಹಾಕುವ ಕಾರ್ಯ ನಡೆಯುತ್ತಿದೆ.

ಅಧಿಕಾರಿಗಳೇ ಮಧ್ಯವರ್ತಿಗಳು-
ಹೊಳಲ್ಕೆರೆಯಲ್ಲಿ ದಲಿತರು
, ಬಡವರ ಭೂಮಿ ಕಬಳಿಕೆ ವಿಷಯದಲ್ಲಿ ಅಧಿಕಾರಿಗಳೇ ಮಧ್ಯವರ್ತಿಗಳಾಗಿದ್ದಾರೆಂಬ ಸಂಶಯ ಕಾಡುತ್ತಿದೆ ಎಂದು ಮಾಜಿ ಸಚಿವ ಆಂಜನೇಯ ದೂರಿದರು. ಈಗಾಗಲೇ ಅನೇಕರ ಆಸ್ತಿ ಕಬಳಿಸಿರುವ ಚಂದ್ರಪ್ಪ, ಈಗ ಸರ್ಕಾರಿ ಭೂಮಿಯ ಒಡಲು ಬಗೆದು ಖನಿಜ ಸಂಪತ್ತು ಕಳ್ಳತನ ಮಾಡುವ ಕೃತ್ಯಕ್ಕೆ ಮುಂದಾಗಿದ್ದಾರೆ. ಇದೆಲ್ಲವೂ ಗೊತ್ತಿದ್ದು ಅಧಿಕಾರಿಗಳು ಮೌನವಾಗಿರುವುದು ಅವರೇ ಈ ಅಕ್ರಮದಲ್ಲಿ ಮಧ್ಯವರ್ತಿಗಳಾಗಿದ್ದಾರೆಂಬ ಭಾವನೆ ಎಂದು ಆರೋಪಿಸಿದರು.

ಸಾಯಿಸಲು ಬಂದಿದ್ರು-
ಶಾಸಕ ಚಂದ್ರಪ್ಪ ದಲಿತರ ಭೂಮಿ ಗಬಳಿಸಿ
, ಪಕ್ಕದಲ್ಲಿ ಗುಡ್ಡದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದನ್ನು ಖಂಡಿಸಿ ನಾನು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಈ ವೇಳೆ ನನ್ನ ಮೇಲೆಯೇ ಲಾರಿ ಹತ್ತಿಸಿ, ಕೊಲ್ಲುವ ಪ್ರಯತ್ನ ನಡೆದಿತ್ತು ಎಂದು ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್ ದೂರಿದರು. ಆದರೂ ನಾನು ಎದೆಗುಂದದೆ ಎಲ್ಲ ದಾಖಲೆ ಸಂಗ್ರಹಿಸಿದ್ದೇನೆ. ಈ ಸಂಬಂಧ ಸಂಬಂಧಿಸಿದ ಸಚಿವರು, ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದೇನೆ. ನನ್ನ ದೂರು ಆಧರಿಸಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಕ್ರಮ ನಡೆದಿರುವುದನ್ನು ಖಚಿತ ಪಡೆಸಿ ವರದಿ ಸಲ್ಲಿಸಿದ್ದಾರೆ. ಕಾನೂನು ಕ್ರಮ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

 

Share This Article
error: Content is protected !!
";