ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಎಂ.ವೆಂಕಟೇಶ್, ಸಹಕಾರಿ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಜಿ.ರಾಮೇಗೌಡರು 60ರ ದಶಕದಲ್ಲಿ ಸಂಘವನ್ನು ಸ್ಥಾಪನೆ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
6 ಸಾವಿರ ಷೇರುದಾರರನ್ನು ಹೊಂದಿರುವ ಸಂಘವು ರೈತರು ಹಾಗೂ ಜನ ಸಾಮಾನ್ಯರಿಗೆ ಉತ್ತಮ ಗುಣಮಟ್ಟದ ದಿನಸಿ ವಸ್ತುಗಳು, ರೈತರಿಗೆ ರಸಗೊಬ್ಬರ ದೊರೆಯುವಂತೆ ಮಾಡುವಲ್ಲಿ ಮುಂಚೂಣಿಯಲ್ಲಿದೆ. ತಾಲ್ಲೂಕಿನ ಹಲವಾರು ಜನ ಸಹಕಾರಿಗಳು ಸಂಸ್ಥೆಯನ್ನು ಬೆಳೆಸಿಕೊಂಡು ಬರುವ ಮೂಲಕ ಮಾದರಿಯಾಗಿದ್ದಾರೆ. ಬದಲಾಗಿರುವ ಕಾಲಘಟ್ಟದ ಸ್ಪರ್ಧೆಯನ್ನು ಎದುರಿಸುವ ಮೂಲಕ ಸಂಘವು ಲಾಭದಾಯಕವಾಗಿ ನಡೆಯುವಂತೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಸಂಘದ ಉಪಾಧ್ಯಕ್ಷ ಕೆ.ಸಿ.ಲಕ್ಷ್ಮೀನಾರಾಯಣ, ಸಂಘದ ಕಾರ್ಯದರ್ಶಿ ಕೆ.ಆನಂದ್ ಹಾಗೂ ನಿರ್ದೇಶಕರು ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು.