ಕ್ರೀಡಾ ಜಾತ್ರೆ ಆಯೋಜನೆ- ಮಾದಾರ ಚನ್ನಯ್ಯ ಸ್ವಾಮೀಜಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಶ್ರೀಗಳ ೧೫೦ನೇ ಜಯಂತ್ಯೋತ್ಸವದ ಅಂಗವಾಗಿ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕ್ರೀಡಾ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಮುರುಘಾಮಠದಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿಗಳು, ಅಕ್ಟೋಬರ್-1 ರಿಂದ 4ರ ವರೆಗೆ ನಗರದ ಜೆ.ಎಂ.ಐ.ಟಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿಯು ನಾಕೌಟ್ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 10 ಇಲಾಖೆಯ ತಂಡಗಳು ಭಾಗವಹಿಸಲಿವೆ. ಕ್ರೀಡೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಆಕರ್ಷಕ ಟ್ರೋಫಿ ನೀಡಲಾಗುವುದು ಕ್ರೀಡಾ ಕೂಟ ಪ್ರಾರಂಭದಲ್ಲಿ ಮತ್ತು ಮುಕ್ತಾಯದಲ್ಲಿ ವರ್ಣರಂಜಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದರು.

 ಎಸ್.ಜೆ.ಎಂ ಪೀಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಬಸವ ಪ್ರಭು ಶ್ರೀಗಳು ಮಾತನಾಡಿ, ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಶ್ರೀಗಳು ೧೫೦ನೇ ಜಯಂತ್ಸೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಸೆ.೨೫ ರಿಂದ ಅ.೪ರವರಗೆ ಬೆಳಿಗ್ಗೆ ಆರೋಗ್ಯ ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಸಂಜೆ ಜಯದೇವ ಶ್ರೀಗಳ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿದೆ ಎಂದರು.

ಕ್ರೀಡಾ ಸಮಿತಿ ಅಧ್ಯಕ್ಷ ಶ್ರೀರಾಮ್ ಮಾತನಾಡಿ ಆಯೋಜನೆ ಮಾಡಲಾಗುವ ಕ್ರೀಡಾ ಕೂಟದಲ್ಲಿ ಕಬಡ್ಡಿ, ಹ್ಯಾಂಡ್ ಬಾಲ್, ಖೋ-ಖೋ ಪಂದ್ಯಾವಳಿಗಳನ್ನು ಅ. ೫ ರಿಂದ ೭ರವರೆಗೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲೆಯ ೧೭ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಜಿಲ್ಲೆಯ ೬ ತಾಲ್ಲೂಕುಗಳಿಂದ ಸುಮಾರು ೧೪೦೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ ಇವರಿಗೆ ಉಚಿತವಾಗಿ ಟೀ ಶರ್ಟ, ವಸತಿ, ಆಹಾರ ಹಾಗೂ ಪ್ರಯಾಣದ ಭತ್ಯೆ ನೀಡಲಾಗುವುದು ಎಂದರು.

ಮಹಿಳಾ ಕ್ರೀಡಾಕೂಟ ಸಮಿತಿ ಅಧ್ಯಕ್ಷೆ ರುದ್ರಾಣಿ ಗಂಗಾಧರ್ ಮಾತನಾಡಿ ಮಹಿಳೆಯರಿಗಾಗಿ ಕ್ರೀಡಾ ಕೂಟ ಏರ್ಪಡಿಸಲಾಗಿದೆ. ಹಗ್ಗ ಜಗ್ಗಾಟ, ಮಡಿಕೆ ಒಡೆಯವುದು ಚಮಚದಲ್ಲಿ ನಿಂಬೆಹಣ್ಣು, ಥ್ರೋಬಾಲ್, ಮ್ಯಾಜಿಕಲ್ ಚೇರ್ ಸೇರಿದಂತೆ ವಿವಿಧ ಆಟಗಳನ್ನು ಹಳೇ  ಮಾಧ್ಯಮಿಕ ಶಾಲಾ ಆವರಣದಲ್ಲಿ ಆಡಿಸಲಾಗುವುದು. ೨೫ ರಿಂದ ೫೦ ವರ್ಷದವರಿಗೆ ಒಂದು ಗುಂಪು, ೫೦ ವರ್ಷ ಮೇಲ್ಪಟ್ಟವರಿಗೆ ಒಂದು ಗುಂಪು ಮಾಡಿ ಆಟ ಆಡಿಸಲಾಗುವುದು. ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು ಅಲ್ಲದೆ ಸಮಾರೋಪದಿನದಂದು ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಮಹಿಳೆಯರು ಬರುವಾಗ ಆಧಾರ ಕಾರ್ಡ್ ತರಬೇಕೆಂದು ತಿಳಿಸಿದರು.

ಸುದ್ದಿ ಗೋಷ್ಟಿಯಲ್ಲಿ ಜಯದೇವ ಕಪ್ ಕ್ರೀಡಾಕೂಟದ ಗೌರವ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಶಂಕರ್ ಮೂರ್ತಿ, ಮಂಜುನಾಥ್ ಗೊಪ್ಪೆ, ಕ್ರೀಡಾ ಕೂಟದ ಉಸ್ತುವಾರಿಗಳಾದ ರವಿಶಂಕರ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಸೈಯದ್ ಅನೀಸ್, ಕಾರ್ಯದರ್ಶಿ ವಿಜಯಕುಮಾರ್, ಶಾಂತಕುಮಾರ್, ಸಂಘಟನಾ ಕಾರ್ಯದರ್ಶಿ ರವಿ ಮಲ್ಲಾಪುರ, ಸೈಯದ್ ಖುದ್ದೂಸ್, ಪ್ರಕಾಶ್ ನಾಯ್ಕ್, ಶಿವರಾಂ, ಜಯಣ್ಣ, ಮುರುಗೇಶ್, ರುದ್ರಮೂರ್ತಿ, ತಿಪ್ಪಣ್ಣ, ಪ್ರಸನ್ನ ಕುಮಾರ್ ಸೇರಿದಂತೆ ಇತರರು ಇದ್ದರು.  

 

- Advertisement -  - Advertisement -  - Advertisement - 
Share This Article
error: Content is protected !!
";