ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹುಬ್ಬಳ್ಳಿಯಲ್ಲಿ ಅಮಾನವೀಯ ಘಟನೆ ನಡೆದಿದೆ ಏಳು ತಿಂಗಳ ಗರ್ಭಿಣಿ ಮಗಳನ್ನು ತಂದೆ ಮತ್ತು ಕುಟುಂಬದವರು ಸೇರಿ ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಈ ಘಟನೆ ನಡೆದು ಆರೇಳು ದಿನಗಳಾಗಿವೆ ಈ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠಾಧ್ಯಕ್ಷರಾದ ಜಗದ್ಗುರು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
ನಾನು ತಡವಾಗಿ ಹೇಳಿಕೆ ನೀಡುತ್ತಿದ್ದೇನೆ ಅದಕ್ಕೆ ಕಾರಣವೂ ಇದೆ ಪ್ರಜ್ಞಾವಂತ ಸಮಾಜದವರು ಅಥವಾ ಬಸವಾದಿಶರಣರ ತತ್ವಗಳನ್ನು ಅಳವಡಿಸಿಕೊಂಡಿದ್ದೇವೆಂದು ಹೇಳುವ ಧಾರ್ಮಿಕ ಚಿಂತಕರು ಕೃತ್ಯ ಖಂಡಿಸುತ್ತಾರೆಂದು ಭಾವಿಸಿದ್ದೆವು. ಇಲ್ಲಿಯವರೆಗೂ ಅದಾಗಲಿಲ್ಲ ನಾನೇ ಈ ಘಟನೆ ಖಂಡಿಸಬೇಕಾಯಿತು. ಏಕೆಂದರೆ ಕೊಲೆಯಾದ ಯುವತಿಯನ್ನು ಮದುವೆಯಾದವನು ಮಾದಿಗರ ಹುಡುಗ.
ಕೆಳ ಜಾತಿಯ ಯುವಕನೋರ್ವ ಮೇಲ್ವರ್ಗದ ಯುವತಿಯನ್ನು ಮದುವೆಯಾದ ಎಂಬ ಕಾರಣಕ್ಕೆ ತನ್ನ ಮಗಳನ್ನೇ ಅದರಲ್ಲೂ ಏಳು ತಿಂಗಳ ಗರ್ಭಿಣಿಯನ್ನು ಮನುಷತ್ವ ಬಿಟ್ಟು ಕ್ರೂರವಾಗಿ ಕೊಂದು ಬಿಟ್ಟರು. ಈ ದೇಶದಲ್ಲಿ ಅಘೋಚಿತ ನಿಯಮವಿದೆ. ದಲಿತರು, ಶೋಷಿತರ ಮೇಲೆ ಮತ್ತು ಅವರಿಗೆ ಸಂಬಂಧಿಸಿದವರ ಮೇಲೆ ದೌರ್ಜನ್ಯಗಳು ನಡೆದರೆ ದಲಿತರೆ ಧ್ವನಿಎತ್ತಬೇಕು. ಮೇಲ್ವರ್ಗದವರು ಮೇಲೆ ಇಂತಹ ಪ್ರಕರಣಗಳು ನಡೆದರೆ ದಲಿತರಾದಿಯಾಗಿ ಎಲ್ಲರೂ ಅವರೊಟ್ಟಿಗೆ ಧ್ವನಿಎತ್ತಬೇಕು.
ಇದೇ ಹುಬ್ಬಳ್ಳಿಯಲ್ಲಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೇಲ್ವರ್ಗದ ಯುವತಿ ಮದುವೆಯಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಅನ್ಯಧರ್ಮಿಯ ಯುವಕ ಕಾಲೇಜಿನ ಕ್ಯಾಂಪಸ್ನಲ್ಲಿಯೇ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ. ಮರು ದಿನವೇ ವಿದ್ಯಾರ್ಥಿ ಸಂಘಟನೆಗಳು, ಹೋರಾಟಗಾರರು ಬೀದಿಗಿಳಿದರು ಧಾರ್ಮಿಕ ಪೀಠಾಧಿಪತಿಗಳು ಸಾಲು ಸಾಲಾಗಿ ಯುವತಿಯ ಮನೆಗೆ ಭೇಟಿ ಕೊಟ್ಟರು.
ಅವತ್ತು ಕೊಲೆಯಾದವಳು ಮೇಲ್ವರ್ಗದ ಹುಡುಗಿ. ಇವತ್ತು ಕೊಲೆಯಾದವಳು ಮೇಲ್ವರ್ಗದ ಹುಡುಗಿಯೇ. ಅಂದು ಬೀದಿಗಿಳಿದು ಖಂಡಿಸಿದರು ಏಕೆಂದರೆ ಅದು ಧರ್ಮದಾರಿತ ಕೊಲೆ. ಇಂದು ಯಾರು ಖಂಡಿಸುತ್ತಿಲ್ಲ ಏಕೆಂದರೆ ಇದು ಜಾತಿ ಆಧಾರಿತ ಕೃತ್ಯ ಎಂದು ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ದಯವೇ ಧರ್ಮದ ಮೂಲ”, “ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ” ಎಂದು ಹೇಳಿದ ಬಸವಣ್ಣನವರ ಅನುಯಾಯಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಬಯಸುತ್ತೇನೆ ಎಂದು ಬಸವಮೂರ್ತಿ ಮಾದಾರ ಸ್ವಾಮೀಜಿ ನೋವಿನಿಂದ ನುಡಿದ್ದಾರೆ.
ಜಾತಿಯ ಕಾರಣಕ್ಕೆ ಗರ್ಭಿಣಿ ಮಗಳನ್ನು ಕ್ರೂರವಾಗಿ ಕೊಲ್ಲುವಷ್ಟು ಮಟ್ಟಕ್ಕೆ ಈ ಸಮಾಜ ಇಳಿಯುತ್ತೆ. ಕೃತ್ಯವೆಸಗಿದವರು ಕಾನೂನಿನಿಂದ ತಪ್ಪಿಸಿಕೊಳ್ಳಬಾರದೆಂದು ಬಸವಮೂರ್ತಿ ಮಾದಾರ ಸ್ವಾಮೀಜಿ ಆಗ್ರಹಿಸಿದ್ದಾರೆ.

