ಅಮೆರಿಕ ಕನ್ನಡ ಸಂಘಟನೆಗಳ ಕೂಟದ(ಅಕ್ಕ) ಅಧ್ಯಕ್ಷರಾಗಿ ಮಧು ರಂಗಯ್ಯ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಮೆರಿಕದ ಕನ್ನಡ ಸಂಘಟನೆಗಳ ಕೂಟದ (ಅಕ್ಕ) ಅಧ್ಯಕ್ಷರಾಗಿ ಮಧು ರಂಗಯ್ಯ ಅವರು ಆಯ್ಕೆಯಾಗಿದ್ದಾರೆ.
ಮುಂದಿನ ಎರಡು ವರ್ಷಗಳ ಅವಧಿಗೆ ಮಧು ರಂಗಯ್ಯ ಅಕ್ಕವನ್ನು ಮುನ್ನಡೆಸಲಿದ್ದಾರೆ. ಮುಂಬರುವ ಅಕ್ಕ ಸಮ್ಮೇಳನ ಹಾಗು ಅಕ್ಕದ ವಿವಿಧ ಕಾರ್ಯಕ್ರಮಗಳು ನೂತನ ಪದಾಧಿಕಾರಿಗಳ ತಂಡದ ನೇತೃತ್ವದಲ್ಲಿ ಜರುಗಲಿದೆ.

ನೂತನ ಪದಾದಿಕಾರಿಗಳ ತಂಡ ಈಗಿದೆ-
ಅಧ್ಯಕ್ಷರಾಗಿ ಮಧುರಂಗಯ್ಯ ,ಕಾರ್ಯದರ್ಶಿಯಾಗಿ ಡಾ.ನವೀನ್ ಕೃಷ್ಣ, ಖಜಾಂಚಿಯಾಗಿ ಚಂದ್ರು ಆರಾಧ್ಯ, ಉಪಾಧ್ಯಕ್ಷರಾಗಿ ರೂಪಶ್ರೀ ಮೇಲುಕೋಟೆ, ರಘು ಶಿವರಾಮ್, ವಿನೋದ್ ಕುಮಾರ್, ಜಂಟಿ ಕಾರ್ಯದರ್ಶಿಯಾಗಿ ಮನು ಗೋರೂರು, ಡಾ.ಲಾವಣ್ಯ, ಸಹ ಕಾರ್ಯದರ್ಶಿಯಾಗಿ ವತ್ಸಾ ರಾಮನಾಥನ್, ಡಾ.ಮೋಹನ್ ಕುಮಾರ್ ಸೇರಿದಂತೆ ಗೌರವ ಸದಸ್ಯರಾಗಿ ಹಿರಿಯ ಅಕ್ಕ ಸಂಘಟರಾದ ಅಮರನಾಥಗೌಡ ಅವರು ಸೇರಿದಂತೆ ಅಮೆರಿಕದ ವಿವಿಧ ರಾಜ್ಯಗಳ ಕನ್ನಡ ಸಂಘದ 20 ಜನರ ತಂಡ ಕಾರ್ಯನಿರ್ವಹಿಸಲಿದೆ.

ಮಧು ರಂಗಯ್ಯ ಯಾರು-
ಮೂಲತ: ಮಂಡ್ಯದವರಾದ ಮಧು ರಂಗಯ್ಯ ಎಂಜಿನಿಯರಿಂಗ್ ಪದವಿಧರರು. ವ್ಯಾಸಂಗ ಮುಗಿಸಿ ಅಮೆರಿಕದ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಆರಂಭಿಸಿದರು. ಕಳೆದ ಮೂರು ದಶಕಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ತಾಯ್ನಾಡಿನಿಂದ ದೂರವಾಗಿದ್ದರೂ ತನ್ನ ನಾಡನ್ನು ಮರೆಯದೆ ನಿರಂತರವಾಗಿ ಕನ್ನಡ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

 ಅಮೆರಿಕದ ವಿವಿಧ ಕನ್ನಡ ಸಂಘಟನೆಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಾ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಎಲ್ಲೆಡೆ ಪಸರಿಸುವ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಕನ್ನಡ ಬಗೆಗಿನ ಇವರ ಕಾಳಜಿಗೆ ಅಕ್ಕ ಸಂಘಟನೆಯ ಜವಾಬ್ದಾರಿ ಒಲಿದಿದೆ.
ಈ ಕುರಿತು ಸಂತಸ ಹಂಚಿಕೊಂಡಿರುವ ಮಧು ರಂಗಯ್ಯ ಅವರು, ಅಕ್ಕ ಸಂಘಟನೆಗೆ 25 ವರ್ಷಗಳು ತುಂಬಿರುವ ಬೆಳ್ಳಿ ಹಬ್ಬ ಸಂದರ್ಭದಲ್ಲಿ ಸಂಘಟನೆಯ ಜವಾಬ್ದಾರಿ ಸಿಕ್ಕಿರುವುದು ಖುಷಿ ಉಂಟು ಮಾಡಿದೆ.

ಅಮೆರಿಕದಲ್ಲಿನ ಕನ್ನಡಿಗರನ್ನು ಮತ್ತಷ್ಟು ಒಂದುಗೂಡಿಸಿ ಕನ್ನಡ ಭಾಷೆ, ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತೇನೆ. ಹೊಸ ತಲೆಮಾರಿನ ಅನೇಕರು ಅಮೆರಿಕಕ್ಕೆ ಬರುತ್ತಿದ್ದಾರೆ. ಅವರನ್ನು ಸಂಘಟಿಸಿ ಕನ್ನಡದ ಕುರಿತಾದ ಅಭಿಮಾನ, ಆಲೋಚನೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಾದಷ್ಟು ಮಾರ್ಗದರ್ಶನ ಮಾಡುತ್ತೇನೆ. ಸಪ್ತ ಸಾಗರದಾಚೆಗೂ ಕನ್ನಡದ ಕಂಪು ಹಬ್ಬುತ್ತಲೇ ಇರುತ್ತದೆ ಎಂದು ಮಧು ರಂಗಯ್ಯ ಹೇಳಿದರು.

 

 

Share This Article
error: Content is protected !!
";