ಕೆ.ಎನ್.ರಾಜಣ್ಣ ವಜಾ ಖಂಡಿಸಿ ಮಧುಗಿರಿ ಬಂದ್ ಮಾಡಿದ ಅಭಿಮಾನಿಗಳು

News Desk

ಚಂದ್ರವಳ್ಳಿ ನ್ಯೂಸ್, ಮಧುಗಿರಿ:
ಸಚಿವ ಸಂಪುಟದಿಂದ ಕೆ.ಎನ್ ರಾಜಣ್ಣ
ಅವರನ್ನು ವಜಾ ಮಾಡಿದ್ದನ್ನು ಖಂಡಿಸಿ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ರಾಜಣ್ಣ ಬೆಂಬಲಿಗರು, ಅಭಿಮಾನಿಗಳು ಮಂಗಳವಾರ ಬೃಹತ್​​ ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿದೆ.
ಇದೇ ಸಂದರ್ಭದಲ್ಲಿ ಆಕ್ರೋಶ ಭರಿತ ಅಭಿಮಾನಿಗಳು ಮಧುಗಿರಿ ಬಂದ್​ಗೆ ಕರೆ ನೀಡಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವ ಮೂಲಕ ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ ಹೈ ಕಮಾಂಡ್ ಕೂಡಲೇ ರಾಜಣ್ಣ ಅವರನ್ನ ವಜಾ ಮಾಡಿರುವುದನ್ನ ಹಿಂಪಡೆಯಬೇಕು, ಇದು ಕೇವಲ ಶ್ಯಾಂಪಲ್, ಕಾಂಗ್ರೆಸ್ ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

- Advertisement - 

ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಭಾಗಿಯಾದರು.
ಈ ವೇಳೆ ರಾಜಣ್ಣನವರ ಅಭಿಮಾನಿಯೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸುವಂತ ಹೈಡ್ರಾಮಾ ಕೂಡಾ ನಡೆಯಿತು. ಕೂಡಲೇ ಸ್ಥಳದಲ್ಲಿದ್ದ ಇತರರು ಆತನ ಮೇಲೆ ನೀರು ಸುರಿದು ರಕ್ಷಿಸಿದ ಪ್ರಸಂಗ ಜರುಗಿತು.

ಸಾಮೂಹಿಕ ರಾಜೀನಾಮೆ-
ಮಧುಗಿರಿ ಸ್ಥಳೀಯ ಸಂಸ್ಥೆಗಳಲ್ಲಿರುವ ಜನ ಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡಲು ಮುಂದಾದರು
.
ಮಧುಗಿರಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. 10ನೇ ವಾರ್ಡ್ ಸದಸ್ಯೆ ಗಿರಿಜಾ ಮಂಜುನಾಥ್ ಉಪ ವಿಭಾಗಾಧಿಕಾರಿಗೆ ರಾಜೀನಾಮೆ ಪತ್ರ ಕೂಡಾ ಸಲ್ಲಿಸಿ ಕಾಂಗ್ರೆಸ್ ಗೆ ಸವಾಲ್ ಹಾಕಿದ್ದಾರೆ.

- Advertisement - 

ಕೂಡಲೇ ಮುಖ್ಯಮಂತ್ರಿಗಳು ಮರು ಪರಿಶೀಲಿಸಿ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಆಗ್ರಹಿಸಿದ ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರು ಪಟ್ಟಣದಲ್ಲಿ ಬಂದ್‌ ನಡೆಸಿದರು.


ಕಾರ್ಯಕರ್ತರು
, ಬೆಂಬಲಿಗರು ಒಂದೆಡೆ ಸೇರಿ ಸಭೆ ನಡೆಸಿದ ಬಳಿಕ ರಾಜಣ್ಣ ಅವರ ಭಾವಚಿತ್ರಗಳನ್ನಿಡಿದು ರಸ್ತೆಗಿಳಿದು ಅಂಗಡಿಗಳನ್ನು ಬಂದ್‌ ಮಾಡಿಸಿ ಪ್ರತಿಭಟನೆ ನಡೆಸಿದರು.

ಮಧುಗಿರಿ ಕ್ಷೇತ್ರವನ್ನು ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ. ಜತೆಗೆ ಸಹಕಾರ ಕ್ಷೇತ್ರದಲ್ಲೂ ಸಹ ಉತ್ತಮ ಸೇವೆ ಮಾಡಿದ್ದು, ಇಂತಹ ನೇರ, ನಿಷ್ಠುರ, ಜನಸ್ನೇಹಿ ರಾಜಕಾರಣಿಯನ್ನು ಏಕಾಏಕಿ ಸಚಿವ ಸಂಪುಟದಿಂದ ವಜಾಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ? ಹಿರಿಯ ರಾಜಕೀಯ ಧುರೀಣರಾದ ರಾಜಣ್ಣ ಅವರ ಸೇವೆ ಜಿಲ್ಲೆಗೆ ಸಾಕಷ್ಟಿದೆ. ಪಕ್ಷವನ್ನೂ ಸಹ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದಾರೆ. ಇಂತಹ ರಾಜಕಾರಣಿಯನ್ನು ಕಾಂಗ್ರೆಸ್‌‍ ಸರ್ಕಾರದ ಸಂಪುಟದಿಂದ ವಜಾಗೊಳಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ನಗರದ ಪ್ರಮುಖ ವೃತ್ತಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಬೆಂಬಲಿಗರು ರಾಜಣ್ಣ ಪರ ಘೋಷಣೆಗಳನ್ನು ಕೂಗುತ್ತ ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್‌ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಕ್ಷಣ ಕ್ಷಣಕ್ಕೂ ಮಧುಗಿರಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಮಧುಗಿರಿ, ತುಮಕೂರು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬಸ್‌‍ಗಳನ್ನು ತಡೆದರು. ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟರೂ ಬೆಂಬಲಿಗರು ಮಾತ್ರ ಪಟ್ಟು ಬಿಡದೆ ಪ್ರತಿಭಟನೆ ನಡೆಸಿದರು.

 

 

Share This Article
error: Content is protected !!
";