ಉಸಿರಿರುವ ತನಕ ರೈತರ ಸೇವೆ ಮಾಡುವೆ-ಮಾಧುರಿ ಗಿರೀಶ್

News Desk

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಉಸಿರಿರುವತನಕ ಸಣ್ಣ ರೈತರ ಹಾಗೂ ಕಟ್ಟಕಡೆಯವರ ಸೇವೆ ಮಾಡಬೇಕೆಂಬುದೇ ನನ್ನ ಆಸೆ ಎಂದು ಶಿವಗಂಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಐದನೆ ಬಾರಿಗೆ ಗೆಲುವು ಸಾಧಿಸಿರುವ ನಿರ್ದೇಶಕ ಎಸ್.ಆರ್.ಗಿರೀಶ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಬ್ರಹ್ಮಪುರ
, ಪಂಪಾಪುರ, ನಗರಘಟ್ಟ, ಈಚಘಟ್ಟ, ಶಿವಗಂಗ, ಹಳೆಹಳ್ಳಿ ಗೊಲ್ಲರಹಟ್ಟಿ, ಗಿಲಿಕೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಹಕಾರ ಸಂಘದ ಮತದಾರರುಗಳಿಗೆ ಕೃತಜ್ಞತೆ ಸಲ್ಲಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಸಂಕಷ್ಟದಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಲ ಕೊಡಿಸಿದ್ದೇನೆ. ದೇಶಕ್ಕೆ ಅನ್ನ ನೀಡುತ್ತಿರುವ ರೈತರ ಸೇವೆ ಮಾಡುವುದರಿಂದ ಆತ್ಮ ತೃಪ್ತಿಯಿದೆ. ಪ್ರತಿ ಸಹಕಾರ ಸಂಘಗಳಿಗೆ ತಲಾ ಇಪ್ಪತ್ತು ಕೋಟಿ ರೂ.ಗಳ ಸಾಲ ಕೊಡಿಸಿದ್ದೇನೆ. ಸಾಲ ಕೊಡುವಾಗ ಜಾತಿ, ಅಂತಸ್ತನ್ನು ನೋಡಬಾರದು. ಎಲ್ಲರಿಗೂ ಅವರವರ ಪಹಣಿಯ ಆಧಾರದ ಮೇಲೆ ಸಾಲ ಕೊಡಿಸಿ ಜೀವನ ಮಟ್ಟ ಸುಧಾರಣೆಗೆ ಒತ್ತು ಕೊಡಬೇಕು. ಸಹಕಾರ ಸಂಘಗಳ ಲೆಕ್ಕಪತ್ರ, ಅರ್ಹರಿಗೆ ಸಾಲ ನೀಡುತ್ತಿವೆಯೋ ಇಲ್ಲವೋ, ಎಲ್ಲಿ ಎಡವಿದ್ದೇವೆನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಪ್ರತಿಯೊಬ್ಬ ನೂತನ ನಿರ್ದೇಶಕರುಗಳ ಜವಾಬ್ದಾರಿಯಾಗಬೇಕೆಂದು ಎಸ್.ಆರ್.ಗಿರೀಶ್ ಸಲಹೆ ನೀಡಿದರು.

ಹಾಲಿನ ಸೊಸೈಟಿ ನಿರ್ದೇಶಕರುಗಳ ಸ್ಥಾನಕ್ಕೆ ಅರ್ಜಿ ಹಾಕುವವರೆ ಇಲ್ಲದಂತಾಗಿದೆ. ಯಾವುದೆ ಒಂದು ಸಂಸ್ಥೆ ಕಟ್ಟಿದ ಮೇಲೆ ಪ್ರಾಮಾಣಿಕವಾಗಿ ಸೇವೆ ಮಾಡಬೇಕು.

ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ನಮ್ಮ ಗುಂಪು ಗೆದ್ದಿದೆಯೆಂದು ಬೀಗುವುದಿಲ್ಲ. ಎಲ್ಲರನ್ನು ಸಮಾನವಾಗಿ ಕಾಣುತ್ತೇನೆ. ಸಂಕಷ್ಟದಲ್ಲಿರುವವರಿಗೆ ಸಾಲ ಕೊಡಿಸುವ ಪ್ರವೃತ್ತಿ ಮನಸ್ಸು ಇದ್ದಾಗ ಮಾತ್ರ ಚುನಾಯಿತರಾಗಿರುವುದಕ್ಕೆ ನಿಜವಾದ ಗೌರವ ಬರುತ್ತದೆ. ನಮ್ಮ ತಾಲ್ಲೂಕಿಗೆ ಡಿ.ಸಿ.ಸಿ. ಬ್ಯಾಂಕ್‌ನಿಂದ ೨೭ ಕೋಟಿ ರೂ.ಬಂದಿದೆ. ಇದು ಸಾಕಾಗುವುದಿಲ್ಲವೆಂದು ಇನ್ನು ಐದು ಕೋಟಿ ರೂ.ಗಳನ್ನು ತರಿಸಿಕೊಂಡಿದ್ದೇವೆ. ಸಾಲ ಪಡೆದವರು ಪ್ರಾಮಾಣಿಕವಾಗಿ ಮರು ಪಾವತಿ ಮಾಡಿದಾಗ ಮಾತ್ರ ಸಹಕಾರ ಸಂಘಗಳು ಸುಸ್ಥಿತಿಯಲ್ಲಿರುತ್ತವೆ. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಮುಚ್ಚುತ್ತವೆ. ವೈದ್ಯನಾಥನ್ ವರದಿ ಪ್ರಕಾರ ರಾಜ್ಯದಲ್ಲಿ ಬಹಳಷ್ಟು ಸೊಸೈಟಿಗಳು ಮುಚ್ಚಿವೆ.

ನಬಾರ್ಡ್‌ನಿಂದ ಹಣ ಬರುತ್ತಿಲ್ಲ. ಇಲ್ಲಿಯವರೆಗೂ ನಾನು ಸಲ್ಲಿಸುತ್ತಿರುವ ಸೇವೆಗೆ ತಕ್ಕ ಫಲವಾಗಿ ಮತದಾರರು ಈ ಬಾರಿಯ ಚುನಾವಣೆಯಲ್ಲಿಯೂ ನಮ್ಮ ಗುಂಪಿಗೆ ಬಹುಮತ ನೀಡಿದ್ದಾರೆ. ನನ್ನ ಅಧಿಕಾರವಧಿಯಿರುವತನಕ ನಿಮ್ಮಗಳ ಸೇವೆಗೆ ಜೀವ ಮುಡುಪಾಗಿಡುತ್ತೇನೆಂದು ಎಸ್.ಆರ್.ಗಿರೀಶ್ ಭರವಸೆ ನೀಡಿದರು.

ಸಿ.ಮಹೇಶ್, ದಗ್ಗೆ ಶಿವಪ್ರಕಾಶ್, ನೂತನ ನಿರ್ದೇಶಕರುಗಳಾದ ಹೆಚ್.ಕುಬೇರಪ್ಪ, ಮೌನೇಶ್, ಯು.ಎಂ.ವೀರಭದ್ರಪ್ಪ, ವಿ.ಶಶಿಧರ, ಮಮತ, ಸುಜಾತ, ತಿಪ್ಪೇರುದ್ರಪ್ಪ ಡಿ. ಮಹದೇವಪ್ಪ, ಮುಖಂಡರುಗಳಾದ ಮಹರುದ್ರಪ್ಪ, ವಕೀಲ ರಂಗಸ್ವಾಮಿ, ಉಮೇಶ್ ಈಚಘಟ್ಟ, ಮಾಜಿ ನಿರ್ದೇಶಕಿ ಪುಷ್ಪ ಹಾಗೂ ಗಿಲಿಕೇನಹಳ್ಳಿ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

- Advertisement -  - Advertisement - 
Share This Article
error: Content is protected !!
";