ಒಳ ಮೀಸಲಾತಿ ಜಾರಿಗಾಗಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಮಾದಿಗ ಸಮುದಾಯ

News Desk

ಚಂದ್ರಳ್ಳಿ ನ್ಯೂಸ್ ಹಿರಿಯೂರು:
ಪರಿಶಿಷ್ಟ ಜಾತಿಯಲ್ಲೇ ಅತ್ಯಂತ ಅನ್ಯಾಯಕ್ಕೆ ಒಳಗಾದ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿ ಆಗಲೇಬೇಕು ಎಂದು ಕೋಡಿಹಳ್ಳಿ ಆದಿಜಾಂಬವ ಮಠದ  ಷಡಕ್ಷರಮುನಿ ದೇಶಿಕೇಂದ್ರ  ಸ್ವಾಮೀಜಿ ಆಗ್ರಹಿಸಿದರು. ಅವರು ಶುಕ್ರವಾರ ಖಂಡೇನಹಳ್ಳಿಯಿಂದ ಹಿರಿಯೂರು ತಹಶೀಲ್ದಾರ್ ಕಚೇರಿಗೆ ಬಂದ ಒಳ ಮೀಸಲಾತಿ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದರು.

ಪರಿಶಿಷ್ಟ ಜಾತಿಗಳಲ್ಲಿ 101 ವರ್ಗಗಳಿದ್ದು, ಅವುಗಳಲ್ಲಿ ಕೆಲವೇ ಬಲಾಢ್ಯ ಜಾತಿಗಳು ಮೀಸಲಾತಿ ಲಾಭವನ್ನು ಪಡೆಯುವುದರಿಂದ ಮಾದಿಗ ಜಾತಿಗೆ ನಿರಂತರ ಅನ್ಯಾಯ ಆಗಿದೆ ಎಂದು ಸ್ವಾಮೀಜಿ ಹೇಳಿದರು.

 ಮೂರು ದಶಕಗಳ ಸತತ ಒಳ ಮೀಸಲಾತಿ ಹೋರಾಟಕ್ಕೆ ಮಣಿದ ಸರ್ಕಾರ 2005ರಲ್ಲಿ, ಮಾದಿಗ ಜಾತಿಯ ಸ್ಥಿತಿಗತಿ ತಿಳಿಯಲು ನ್ಯಾ.ಸದಾಶಿವ ಆಯೋಗ ರಚನೆ ಮಾಡಿತು. ವರದಿ ತಯಾರಾದ ಸುಮಾರು ಐದಾರು ವರ್ಷಗಳ ನ೦ತರ 2012ರಲ್ಲಿ ವರದಿ ಸ್ವೀಕರಿಸಿ, ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು  ಸ್ವಾಮೀಜಿ ತಿಳಿಸಿದರು.

10 ವರ್ಷದ ನಂತರ ಈ ಹಿಂದಿನ ಸರ್ಕಾರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದು ಬಿಟ್ಟರೆ ಮಾದಿಗ ಸಮುದಾಯಕ್ಕೆ ಆಶಾದಾಯಕ ಫಲಿತಾಂಶ ಸಿಗಲಿಲ್ಲ  ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿ, ಆಯಾ ರಾಜ್ಯ ಸರ್ಕಾರಗಳು ಒಳ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಬಹುದು ಎಂದು ಹೇಳಿದ ನ೦ತರ ಈಗಿನ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರದೆ ಮತ್ತೊಂದು ಆಯೋಗದ ರಚನೆಗೆ ಮುಂದಾಗಿರುವುದು ಸರಿಯಲ್ಲ ಹಾಗೂ ಇದು ಕಾಲದೂಡುವ ಕ್ರಮ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಅನ್ಯಾಯಕ್ಕೆ ಒಳಗಾಗಿರುವ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಮಾಡಿ ನ್ಯಾಯ ಒದಗಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

ಹೋರಾಟಗಾರ ಪಾವಗಡ ಶ್ರೀರಾಮ್ ಮಾತನಾಡಿ, ಸದಾಶಿವ ಆಯೋಗದ ವರದಿ ಜಾರಿಗೆ ಬಂದರೆ ಮಾದಿಗರ ಬದುಕು ಹಸನಾಗುತ್ತದೆ ಆದ್ದರಿಂದ ಈ ಸರ್ಕಾರ ಕೂಡಲೇ ವರದಿ ಜಾರಿಗೆ ಮುಂದಾಗಬೇಕು ಎಂದು ತಿಳಿಸಿದರು. ರಾಜಸ್ತಾನ, ಪಂಜಾಬ್, ಆಂಧ್ರಪ್ರದೇಶ, ತಮಿಳುನಾಡುವಿನಲ್ಲಿ ಒಳ ಮೀಸಲಾತಿ ಜಾರಿಗೆ ಬಂದಿದೆ. ನಮ್ಮ ರಾಜ್ಯದಲ್ಲಿ ವರದಿ ಜಾರಿ ಬಗ್ಗೆ ಸರ್ಕಾರದ ಅಸಡ್ಡೆ ಏಕೆ ಎಂದು ಪ್ರಶ್ನಿಸಿದರು.

ಈಗಿನ ಸರ್ಕಾರ ಸದಾಶಿವ ಆಯೋಗದ ವರದಿ ಜಾರಿ ಮಾಡದೆ ಹೋದರೆ ಮಾದಿಗರ ಆಕ್ರೋಶಕ್ಕೆ ಕಾರಣವಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು. ವರದಿ ಜಾರಿ ಆಗುವ ತನಕ ಎಲ್ಲ ಇಲಾಖೆಗಳ ಹುದ್ದೆಗಳನ್ನು ತುಂಬಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಷಡಕ್ಷರಮುನಿ ಸ್ವಾಮೀಜಿ, ಪಾವಗಡ ಶ್ರೀರಾಮ್, ಬಿ.ಜಿ.ಸಾಗರ್, ಕೆ.ಪಿ. ಶ್ರೀನಿವಾಸ್, ಬಬ್ಬೂರು ಪರಮೇಶ್ವರಪ್ಪ ಮಾದಿಗ, ಚಿದಾನಂದ್, ಶಿವಕುಮಾರ್, ಹನುಮಂತರಾಯ, ರಾಘವೇಂದ್ರ, ಮಾರುತೇಶ್, ಓಂಕಾರ್, ಕರಿಯಪ್ಪ, ಹನುಮಂತರಾಯ, ಬೆಳ್ಳಿ, ಮಹೇಶ್, ಮುಂತಾದವರು ಇದ್ದರು.

- Advertisement -  - Advertisement -  - Advertisement - 
Share This Article
error: Content is protected !!
";