ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿರ್ದೇಶಕ ಹರಿವರಾಸನಂ ಮೊದಲ ಚಿತ್ರದಲ್ಲೇ ವಿಜಯಪತಾಕೆ ಹಾರಿಸಿದ್ದಾರೆ. ಅವರ ನಿರ್ದೇಶನದ ಪ್ರಥಮ ಚಿತ್ರ ಮಗ್ಗಿ ಪುಸ್ತಕ ಇದೀಗ 25 ನೇ ದಿನದತ್ತ ಸಾಗಿದೆ. ಮಹಿಳಾ ಪ್ರೇಕ್ಷಕರೇ ಹೆಚ್ಚಾಗಿ ಬಂದು ಚಿತ್ರ ನೋಡುತ್ತಿದ್ದು ಈಗ ಹತ್ತಕ್ಕೂ ಹೆಚ್ಚು ಸೆಂಟರ್ ಗಳಲ್ಲಿ 25 ದಿನ ಪೂರೈಸಿದೆ. ಬೆಂಗಳೂರು, ಮೈಸೂರು,ಅಲ್ಕದೆ ಶಿವಮೊಗ್ಗ ಭಾಗದಲ್ಲಿ ಚಿತ್ರದ ಕಲೆಕ್ಷನ್ ಹೆಚ್ಚಾಗುತ್ತಿದೆ. ಜತೆಗೆ ಸಾಕಷ್ಟು ಶಾಲಾ ವಿದ್ಯಾರ್ಥಿಗಳು ಕೂಡ ಈಗಾಗಲೇ ಚಿತ್ರವನ್ನು ವೀಕ್ಷಿಸಿದ್ದಾರೆ.
ಇದರ ಜತೆಗೆ ಈ ವಾರದಿಂದ ಉತ್ತರ ಕರ್ನಾಟಕದಲ್ಲೂ ಈ ವಾರದಿಂದ 25ಕ್ಕೂ ಹೆಚ್ಚು ಥೇಟರುಗಳಲ್ಲಿ ಚಿತ್ರ ಪ್ರದರ್ಶನ. ಕಾಣಲಿದೆ. ಹರಿವರಾಸನಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ ಮಗ್ಗಿಪುಸ್ತಕ. ಕಳೆದ ತಿಂಗಳು ರಿಲೀಸಾಗಿದ್ದ ಈ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ಚಿತ್ರವೀಗ 25 ದಿನಗಳ ಸಂಭ್ರಮದಲ್ಲಿದೆ.
ಚಿನ್ನಸ್ವಾಮಿ ಫಿಲಂಸ್ ಬ್ಯಾನರ್ ಅಡಿ ಎತಿರಾಜ್ ಸ್ನೇಹಿತರ ಜತೆಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜತೆಗೆ ನಿರ್ದೇಶಕರೂ ಕೈಜೋಡಿಸಿದ್ದಾರೆ.
ಮಗ್ಗಿ ಪುಸ್ತಕ ಬದುಕಿನ ಲೆಕ್ಕಾಚಾರ, ನಮ್ಮ ಜೀವನವೇ ಒಂದು ಮಗ್ಗಿಪುಸ್ತಕ ಇದ್ದಂತೆ, ಇದರಲ್ಲಿ ಒಳ್ಳೆದನ್ನು ಕೂಡಬೇಕು, ಕೆಟ್ಟದ್ದನ್ನು ಕಳೆಯಬೇಕು, ಜ್ಞಾನವನ್ನು ಗುಣಿಸಬೇಕು, ಅಜ್ಞಾನವನ್ನು ಭಾಗಿಸಬೇಕು. ಅವನಿ ಎಂಬ ಕಾದಂಬರಿಯನ್ನು ಆಧರಿಸಿ ಮಾಡಿದ ಚಿತ್ರವಿದು. ಇದು ನಾಲ್ಕು ಆಯಾಮಗಳಲ್ಲಿ ನಡೆಯುವ ಹೈಪರ್ ಲಿಂಕ್ ಚಿತ್ರ. ಜೀವನದ ಲೆಕ್ಕಾಚಾರ ಇದರಲ್ಲಿದೆ.
ಬೆಂಗಳೂರು, ಮೈಸೂರು, ಮಂಗಳೂರು, ನಂಜನಗೂಡು, ಶ್ರೀರಂಗಪಟ್ಟಣ, ಹೆಚ್.ಡಿ.ಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ, ಮಗ್ಗಿಪುಸ್ತಕ ಚಿತ್ರದಲ್ಲಿ ಒಟ್ಟಿ 7 ಹಾಡುಗಳಿದ್ದು ಎಸ್.ಎಸ್. ನಾಚಪ್ಪ ಅವರ ಸಂಗೀತ ಸಂಯೋಜನೆಯಿದೆ. ಡಾ. ವಿಷ್ಣುವರ್ಧನ್ ಅಭಿನಯದ ಅಪ್ಪಾಜಿ, ಜಮೀನ್ದರ‍್ರು ಚಿತ್ರಗಳಿಗೆ ಸಂಗೀತ ನೀಡಿದ್ದ ಎಂ.ಎಂ.ಕೀರವಾಣಿ ಬಹಳ ದಿನಗಳ ನಂತರ ಈ ಚಿತ್ರದ ಹಾಡೊಂದಕ್ಕೆ ದನಿಯಾಗಿರುವುದು ವಿಶೇಷ. ಉಳಿದಂತೆ ಕನ್ನಡ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್,ಕಂಭದ ರಂಗಯ್ಯ, ನವೀನ್ ಸಜ್ಜು, ಇಂದು ನಾಗರಾಜ್, ಗುರುರಾಜ್ ಹೊಸಕೋಟೆ, ಸೈಂಧವಿ, ವೈಕಂ ವಿಜಯಲಕ್ಷ್ಮಿ ಹಾಗೂ ರವೀಂದ್ರ ಸೊರಗಾವಿ ಸೇರಿದಂತೆ 17 ಜನ ಈ ಚಿತ್ರದಲ್ಲಿ ಹಾಡಿರುವುದು ಮತ್ತೊಂದು ವಿಶೇಷ.
ಈ ಚಿತ್ರವನ್ನು ಎಂ.ಪಿ. ಫಿಲಂಸ್ ಮೂಲಕ ಕೆ. ಮುನೀಂದ್ರ ಅವರು ರಿಲೀಸ್‌ಮಾಡಿದ್ದರು.ಸರ್ಕಾರಿ ಹಿರಿಯ ಪಾಠಶಾಲೆ ಖ್ಯಾತಿಯ ರಂಜನ್ ಕಾಸರಗೋಡು, ರಾನ್ವಿ ಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ಶೋಭರಾಜ್, ಮೇಘನಾ, ಮೈಸೂರು ರಮಾನಂದ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಪ್ರಭ, ರಾಘು ರಮನಕೊಪ್ಪ ಇನ್ನಿತರರು ನಟಿಸಿದ್ದಾರೆ. ಈ ಚಿತ್ರಕ್ಕೆ ನಂದಕುಮಾರ್ ಅವರ ಛಾಯಾಗ್ರಹಣ, ಶಿವಕುಮಾರ್ ಅವರ ಸಂಕಲನವಿದೆ.

