ಸಾಮಾನ್ಯನಾಗಿದ್ದ ಮಹರ್ಷಿ ಅಸಾಮಾನ್ಯನಾಗಿದ್ದು ವಿಕಾಸದ ಹಾದಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಮಾನ್ಯನಿಂದ ಹಿಡಿದು ಅಸಮಾನ್ಯ ವ್ಯಕ್ತಿಯಾಗುವ ಹಿನ್ನಲೆಯಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳು ನಡುವಿನ ದಾರಿಯ ಏಳು ಬೀಳುಗಳು ನಂತರ ಕೊನೆಗೆ ಸಿಗುವ ಅತ್ಯಂತಿಕ ಅನುಭವದ ಸಾರದ ಮೊತ್ತದ ರೂಪವೇ ಮಹರ್ಷಿ ವಾಲ್ಮೀಕಿಗಳು ಎಂದು ನಗರದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಗಂಗಾಧರ್ ಅಭಿಪ್ರಾಯಪಟ್ಟರು.

ಕಾಲೇಜಿನಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಅವರ ಜಯಂತಿಯಲ್ಲಿ ಮಹರ್ಷಿಗಳ ಭಾವ ಚಿತ್ರಕ್ಕೆ ಪುಷ್ಪನಮನ ಸಮರ್ಪಿಸಿ ಅವರು ಮಾತನಾಡಿದರು.

- Advertisement - 

ಗ್ರಂಥಪಾಲಕ ವೀರಯ್ಯ.ಎಂ ಮಾತನಾಡಿ ಯಾವುದೇ ಒಬ್ಬ ಪುಣ್ಯ ಪುರುಷರ ಜೀವನ ಮೌಲ್ಯಗಳು ಒಂದು ಜಾತಿಗೆ ಸೀಮಿತವಲ್ಲ. ಅವು ಎಲ್ಲ ಕಾಲಕ್ಕೂ ಮತ್ತೆ ಸರ್ವಜನಾಂಗ ಅನುಸರಿಸಲು ಯೋಗ್ಯವಾಗಿವೆ. ಹಾಗೆಯೇ ವಾಲ್ಮೀಕಿಗಳು  ತಮ್ಮ ವ್ಯಕ್ತಿತ್ವ ರೂಪಿಸಿಕೊಂಡು ನಂತರ ಸಮಾಜ ಸುಧಾರಣೆಯ ಮಾರ್ಗದ ಮಹಾಕಾವ್ಯ ಬರೆದರೆಂದು ಹೇಳಿದರು.

ಕಾಲೇಜಿನ ಬೋಧಕ ಕೆ.ಸುರೇಶ್ ಮಾತನಾಡಿ ರತ್ನಾಕರ ಎನ್ನುವ ವ್ಯಕ್ತಿ ತನ್ನಲ್ಲಿ ಆದ ಘಟನೆಗಳನ್ನು ನೆನಸಿಕೊಳ್ಳುತ್ತ ಮುಂದೆ ಇಂಥವುಗಳು ಆಗಬಾರದೆಂದು ತಪಸ್ಸಿನಲ್ಲಿ ಮಗ್ನರಾಗಿದ್ದ ದಿನಗಳ ಸಂದರ್ಭದಲ್ಲಿ ಸುತ್ತಲೂ ಹುತ್ತ ಬೆಳೆದ ಕಾರಣ ಅವರಿಗೆ ವಾಲ್ಮೀಕಿ ಎಂದು ಹೆಸರು ಬಂತೆಂದು ಸ್ಮರಿಸಿಕೊಂಡರು.

- Advertisement - 

ಕಾಲೇಜಿನ ಅಧೀಕ್ಷಕ ಸಿ. ಎನ್ .ಮೋಹನ್ ಮಾತನಾಡಿ ಪ್ರಪಂಚದ ಎಲ್ಲ ದಾರ್ಶನಿಕರು ತಮ್ಮ ಬದುಕಿನಲ್ಲಿ ಕಷ್ಟದ ಹಾದಿಯನ್ನ ಕ್ರಮಿಸಿಯೇ ಸಮಾಜ ಸುಧಾರಣೆಯತ್ತ ಸಾಗಿದ್ದಾರೆ. ಮಹರ್ಷಿಗಳೂ ಸಹ ತಮ್ಮ ಜೀವನದಲ್ಲಿ ನೋವು ಸಂಕಷ್ಟ ಎದುರಿಸಿ ಎಚ್ಚೆತ್ತುಕೊಂಡು ಉತ್ತಮ ಮಾರ್ಗ ಕಂಡುಕೊಂಡು ಸಮಾಜಕ್ಕೆ  ಸನ್ಮಾರ್ಗವನ್ನು ತೋರಿಸಿದ್ದಾರೆಂದರು.

ಕಚೇರಿ ಸಿಬ್ಬಂದಿ ಲಿಂಗರಾಜು ಮಾತನಾಡಿ ಮಹಾ ಮಹಿಮರ ಜೀವನದ ಆದರ್ಶ ಮೌಲ್ಯಗಳನ್ನು ನಾವು ಕೇವಲ ಆಡಂಬರದ, ತೋರಿಕೆಯ ರೀತಿಯಲ್ಲಿ ಆಚರಿಸುವುದಕ್ಕಿಂತ ನೈಜ ವಿಚಾರಗಳನ್ನು ಪ್ರಚಾರ ಮತ್ತು ಪ್ರಸಾರ ಮಾಡಬೇಕಿದೆ ಎಂದು ಹೇಳಿದರು.

ರುದ್ರಮೂರ್ತಿ ಎಂ. ಜೆ ಮಾತನಾಡಿ ಈ ನಾಡಿಗೆ ತ್ಯಾಗ ಬಲಿದಾನಗಳ ಅಮೂಲ್ಯ ಕೊಡುಗೆ ನೀಡಿದಂತಹ ಮಹಾಮಹಿಮರ ಜೀವನದಲ್ಲಿಯೂ  ತಪ್ಪುಗಳು ಆಗಿವೆ. ಅವುಗಳು ಮತ್ತೆ ಪುನರಾವರ್ತನೆ ಆಗದಂತೆ ನೋಡಿಕೊಂಡು ಜೀವನದಲ್ಲಿ ಜಾಗೃತಿಯಿಂದ ಮುನ್ನಡೆದು ಈ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ.

ಅಂತಹವರ ಜಯಂತಿ ಸ್ಮರಣೆ ಕೇವಲ ಔಪಚಾರಿಕವಾಗಿರದೆ ಸಾಧ್ಯವಾದಷ್ಟು ಜೀವನದಲ್ಲಿ ಅವರ ಮಾರ್ಗದರ್ಶನ ನಡೆ ನುಡಿ ಅಳವಡಿಸಿಕೊಂಡರೆ ಜಯಂತಿಗಳಿಗೆ, ಸ್ಮರಣೆಗೆ ಅರ್ಥ ಬರುತ್ತದೆ ಎನ್ನುವ ಕಳಕಳಿ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಬಾಬು.ಬಿ ಹಾಗೂ ಕೆಲ ವಿದ್ಯಾರ್ಥಿಗಳು ಹಾಜರಿದ್ದರು.

 

Share This Article
error: Content is protected !!
";