ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸರ್ಕಾರವು 2026ನೇ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಅಲ್ಪ ಬದಲಾವಣೆ ಮಾಡಿದ್ದು, ಮಹಾವೀರ ಜಯಂತಿ ಪ್ರಯುಕ್ತ ನೀಡಲಾಗಿದ್ದ ರಜೆಯ ದಿನಾಂಕವನ್ನು ಮಾರ್ಪಡಿಸಿದೆ.
ಪೂರ್ವ ನಿಗದಿತ ವೇಳಾಪಟ್ಟಿಯಂತೆ 2026 ನೇ ಮಾರ್ಚ್ 31 ಮಂಗಳವಾರ ನೀಡಲಾಗಿದ್ದ ಸಾರ್ವತ್ರಿಕ ರಜೆಯನ್ನು ಈಗ 2026 ನೇ ಮಾರ್ಚ್ 30 ರ ಸೋಮವಾರಕ್ಕೆ ಬದಲಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ರಜೆಯು ‘ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್, 1881′ ರ ಅಡಿಯಲ್ಲಿಯೂ ಅನ್ವಯವಾಗಲಿದೆ.
ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿಗಳು ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಸಾರ್ವಜನಿಕರು ಮತ್ತು ಸರ್ಕಾರಿ ನೌಕರರು ಈ ಬದಲಾವಣೆಯನ್ನು ಗಮನಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

