ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಇಡೀ ಜಗತ್ತು ಇಂದು ಸ್ವಾರ್ಥ ಮತ್ತು ಯುದ್ಧದ ಭೀತಿಯಲ್ಲಿ ಬದುಕುತ್ತಿದ್ದು, ಇಂತಹ ಸಂದರ್ಭದಲ್ಲಿ ಭಗವಾನ್ ಮಹಾವೀರರು ಬೋಧಿಸಿದ ಶಾಂತಿ ಮತ್ತು ಅಹಿಂಸೆಯ ತತ್ತ್ವಗಳು ಅತ್ಯಂತ ಪ್ರಸ್ತುತವಾಗಿವೆ ಎಂದು ಸಂಸ್ಕೃತಿ ಚಿಂತಕ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕಸಾಪ ವತಿಯಿಂದ ಆಯೋಜಿಸಲಾಗಿದ್ದ “ವರ್ಧಮಾನ ಮಹಾವೀರರ ಕೊಡುಗೆಗಳು” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ವಿಶ್ವಗುರು ಭಾರತ: ಭಾರತವು ಶಾಂತಿಯ ಶಕ್ತಿಯಾಗಿ ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದೆ. ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರರು ಸಕಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಸಾರಿದ ಮಹಾನ್ ಶಾಂತಿದೂತರು ಎಂದು ಋಗ್ವೇದಿ ಬಣ್ಣಿಸಿದರು.
ತ್ಯಾಗ ಮತ್ತು ಜ್ಞಾನ: ಅರಮನೆಯ ವೈಭವವನ್ನು ತ್ಯಜಿಸಿ 12 ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದ ಮಹಾವೀರರು, ಆತ್ಮಕಲ್ಯಾಣದ ಜೊತೆಗೆ ಜಗತ್ತಿನ ಕಲ್ಯಾಣವೇ ನಮ್ಮ ಕರ್ತವ್ಯವಾಗಬೇಕು ಎಂಬ ಸರಳ ಸತ್ಯವನ್ನು ಬೋಧಿಸಿದರು.
ಅಹಿಂಸೆಯೇ ಪರಮಧರ್ಮ: ಕಾರ್ಯಕ್ರಮ ಉದ್ಘಾಟಿಸಿದ ಕಸ್ತೂರಿ ಕನ್ನಡ ಸಂಘದ ಮುಖಂಡ ಬೋಧಿ ಚೀಟು ಲಿಂಗರಾಜು, ಮಹಾವೀರರ ಅಹಿಂಸೆ ಮತ್ತು ಸರಳ ಜೀವನದ ಸಂದೇಶಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.
ಮಾನವೀಯ ಮೌಲ್ಯ: ನಗರಸಭಾ ಮಾಜಿ ಸದಸ್ಯೆ ಪದ್ಮ ಪುರುಷೋತ್ತಮ್ ಮಾತನಾಡಿ, ಮನುಷ್ಯ ಇತರರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು, ಅಹಿಂಸೆ ನಮ್ಮ ಬದುಕಿನ ದಾರಿಯಾಗಲಿ ಎಂದು ಆಶಿಸಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಕಸಾಪ ನಿರ್ದೇಶಕ ಬಿ.ಕೆ. ಆರಾಧ್ಯ ಅವರು ಏಕಾಗ್ರತೆ ಮತ್ತು ಮೌನದ ಮಹತ್ವದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ರವಿಚಂದ್ರಪ್ರಸಾದ್, ಎಲ್. ಶಿವಲಿಂಗಮೂರ್ತಿ, ಗೀತಾ ಸುರೇಶ್ ಗೌಡ, ಮಂಜುನಾಥ್, ಮಹೇಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

