ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿ
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಭಾರತದಲ್ಲಿ ಸಂಭ್ರಮದಿಂದ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ.
ಈ ವರ್ಷ ಜನವರಿ 14 2025 ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ (ದಕ್ಷಿಣದಿಂದ ಉತ್ತರಾಭಿಮುಖವಾಗಿ ಸೂರ್ಯ ಪಥ ಬದಲಿಸುವ) ದಿನದಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
ಹಬ್ಬದ ಅರ್ಥ ಮಹತ್ವ-
ಮಕರ ಸಂಕ್ರಾಂತಿ ಸೂರ್ಯನ ಉತ್ತರಾಯಣ ಆರಂಭದ ಸಂಕೇತವಾಗಿದೆ. ಈ ದಿನದಿಂದ ದಿನಗಳ ಉದ್ದ ಹೆಚ್ಚಾಗಲು ಪ್ರಾರಂಭವಾಗುತ್ತದೆ.
ಕೃಷಿಕರಿಗೆ ಇದು ವಿಶೇಷ ದಿನವಾಗಿದ್ದು, ಹೊಸ ಬೆಳೆಗಳ ತರುವಾಯ ಅವರ ಶ್ರಮಕ್ಕೆ ಮೊದಲ ಫಲವನ್ನು ಸವಿಯುವ ಸುಗ್ಗಿ ಹಬ್ಬವಾಗಿದೆ.
ಹಬ್ಬದ ಆಚರಣೆ-
ಭಾರತದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುವುದು. ಕರ್ನಾಟಕದಲ್ಲಿ ಸಂಕ್ರಾಂತಿ, ಆಂಧ್ರ-ತೆಲಂಗಾಣದಲ್ಲಿ ಭೋಗಿ, ತಮಿಳುನಾಡಿನಲ್ಲಿ ಪೊಂಗಲ್ ಹೀಗೆ ಹಲವಾರು ಹೆಸರಿನಿಂದ ಕರೆಯಲಾಗುತ್ತದೆ.
ಗಾಳಿಪಟ ಹಾರಿಸುವುದು, ದೀಪೋತ್ಸವ, ನದಿಯಲ್ಲಿ ಸೂರ್ಯ ಪೂಜೆ, ಗೌಪೂಜೆ ಮಾಡುವುದರ ಮೂಲಕ ಆಚರಿಸಲಾಗುವುದು.
ಎಳ್ಳು, ಹುರಿಗಡಲೆ, ಶೇಂಗಾ ಬೀಜ, ಕೊಬ್ಬರಿ, ಬೆಲ್ಲ, ಬಣ್ಣ ಬಣ್ಣದ ಜೀರಿಗೆ, ಸಕ್ಕರೆ ಅಚ್ಚು ಮಿಶ್ರಣದ ಪ್ಯಾಕೇಟ್ ಗಳನ್ನು ಮಾಡಿ ಕಬ್ಬಿನ ಜೊತೆ ಜನರು ತಮ್ಮ ಬಂಧು ಭಾಂದವರೊಂದಿಗೆ ಎಳ್ಳು – ಬೆಲ್ಲ ಬೀರಿ ಸಂಭ್ರಮದಿಂದ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುವರು.
ಎಳ್ಳು – ಬೆಲ್ಲ ತಿನ್ನುವುದರ ಆರೋಗ್ಯ ಪ್ರಯೋಜನಗಳು-
ಎಳ್ಳು ಮತ್ತು ಬೆಲ್ಲವು ಉಷ್ಣ ಗುಣ ಹೊಂದಿದೆ ಹಾಗೂ ದೇಹದಲ್ಲಿ ಉಷ್ಣತೆ ಹೆಚ್ಚಿಸುವುದು. ಎರಡರಲ್ಲೂ ಉತ್ತಮ ಪ್ರಮಾಣದ ಪೋಷಕಾಂಶಗಳಿದ್ದು, ಇದರಿಂದ ಚಳಿಗಾಲದಲ್ಲಿ ದೇಹವನ್ನು ಬಿಸಿಯಾಗಿಡಲು ಇದು ಸಹಕಾರಿ ಆಗಿದೆ.
ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂನಿಂದ ಸಮೃದ್ಧ:
ಎಳ್ಳಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಇದೆ. ಇವೆರಡು ಮೂಳೆಗಳ ಆರೋಗ್ಯ ಕಾಪಾಡಲು ತುಂಬಾ ಸಹಕಾರಿ ಆಗಿದೆ. ಮೂಳೆಗಳ ಆರೋಗ್ಯ ಕಾಪಾಡುವ ಜತೆಗೆ ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂನಿಂದ ಸ್ನಾಯುಗಳ ಕಾರ್ಯ, ನರ ಮತ್ತು ಹೃದಯದ ಕಾರ್ಯ ಸುಧಾರಣೆ ಆಗುವುದು. ಮೆಗ್ನೀಸಿಯಮ್ ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡುವುದು. ಅದೇ ರೀತಿಯಾಗಿ ರಕ್ತದೊತ್ತಡ ನಿಯಂತ್ರಿಸುವುದು.
ಕಬ್ಬಿಣಾಂಶವು ಸಮೃದ್ಧವಾಗಿದೆ:
ಬೆಲ್ಲದಲ್ಲಿ ಕಬ್ಬಿಣಾಂಶವು ಉತ್ತಮ ಪ್ರಮಾಣದಲ್ಲಿದೆ. ದೇಹದ ಬೆಳವಣಿಗೆ ಮತ್ತು ನಿರ್ವಹಣೆಗೆ ಕಬ್ಬಿಣಾಂಶವು ಅಗತ್ಯವಾಗಿದೆ. ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರು ಕಬ್ಬಿಣಾಂಶವು ಅಧಿಕವಾಗಿ ಇರುವ ಆಹಾರ ಸೇವನೆ ಮಾಡಿದರೆ ಆಗ ರಕ್ತ ಸಂಚಾರವು ಸರಿಯಾಗಿ ಆಗಿ, ಸೆಳೆತ ಕಡಿಮೆ ಆಗುವುದು. ರಕ್ತಹೀನತೆ ಇರುವವರು ಬೆಲ್ಲವನ್ನು ಸೇವನೆ ಮಾಡಿದರೆ ಒಳ್ಳೆಯದು.
ಇಂತಹ ಹಬ್ಬದ ಆಚರಣೆಯಿಂದ ನಾವು ಬೆಳ್ಳಿ – ಸಿಹಿಯಂತೆ ನಮ್ಮ ಸಂಬಂಧಗಳನ್ನು ಬಲಪಡಿಸೋಣ, ಜೀವನದಲ್ಲಿ ಬೆಳಕು ಹಾಗೂ ಶ್ರೇಯಸ್ಸನ್ನು ಬರಮಾಡೋಣ.
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿಯ ಶುಭಾಶಯಗಳು…
ಲೇಖನ: ಹರಿಯಬ್ಬೆ ತನುಶ್ರೀ ಹೆಚ್.