ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭೂಮಿಯನ್ನು ನಿರಂತರವಾಗಿ ಕಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ವಿಜ್ಞಾನದ ಆಟಿಕೆಗಳನ್ನು ತಯಾರಿಸಿ, ವಿಜ್ಞಾನದ ನಿಯಮ, ತತ್ವ ಸಿದ್ಧಾಂತಗಳನ್ನು ತಿಳಿಯುವುದರ ಮೂಲಕ ಕಸವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಂಡು ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ. ಆರ್. ದಾಸೇಗೌಡ ಅವರು ಅಭಿಪ್ರಾಯ ಪಟ್ಟರು.
ಹಿರಿಯೂರು ತಾಲೂಕು ಆಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ, ಸುಂದರ್ಲಾಲ್ ಬಹುಗುಣ ಹಸಿರುಪಡೆ ಮತ್ತು ವಿಜ್ಞಾನ ಕ್ಲಬ್ ವತಿಯಿಂದ ಸೋಮವಾರ ಪ್ಲಾಸ್ಟಿಕ್ ತ್ಯಾಜ್ಯಗಳ ನಿರ್ವಹಣೆ ಮತ್ತು ವಿಜ್ಞಾನ ಆಟಿಕೆಗಳ ತಯಾರಿಕೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳನ್ನು ಕುರಿತು ಮಾತನಾಡಿದರು.
ಪ್ಲಾಸಿಕ್ ಮಾನವನಿಗೆ ವರವೂ ಹೌದು ಶಾಪವು ಹೌದು, ಕೃಷಿ ಕ್ಷೇತ್ರಕ್ಕೆ ಪ್ಲಾಸ್ಟಿಕ್ ಕೊಳವೆಗಳು, ಹನಿನೀರಾವರಿ ವ್ಯವಸ್ಥೆಗೆ ವರವಾಗಿದ್ದರೆ, ಏಕ ಬಳಕೆ ಪ್ಲಾಸ್ಟಿಕ್ ಶಾಪವಾಗಿ ಜೀವ ಸಂಕುಲವನ್ನು ಕಾಡುತ್ತಿದೆ. ತಾಯಿ ಮಗುವಿನ ಸಂಪರ್ಕಕೊಂಡಿ ಹೊಕ್ಕಳು ಬಳ್ಳಿಯಲ್ಲಿ ಪ್ಲಾಸ್ಟಿಕ್ ಅಂಶ ಕಂಡು ಬಂದಿದೆ. ಕುಡಿವ ನೀರಿನ ಒಂದೇ ಬಾಟಲಿಯನ್ನು ಆರು ತಿಂಗಳ ಕಾಲ ಬಳಸಿದ್ದರಿಂದ ನೀರಲ್ಲಿ ಪ್ಲಾಸ್ಟಿಕ್ ಬೆರೆತು ರಕ್ತದ ಕ್ಯಾನ್ಸರ್ ಗೆ ಕಾರಣವಾಗಿ ದುಬೈ ನ ಒಂಭತ್ತನೇ ತರಗತಿ ವಿದ್ಯಾರ್ಥಿಯೊಬ್ಬಳು ಮರಣಹೊಂದಿರುವುದು ಸುದ್ಧಿಯಾಗಿದೆ.
ಬಿಸಿ ಅಥವಾ ತಂಪು ಆಹಾರ ಪದಾರ್ಥ ಗಳನ್ನು ಪ್ಲಾಸ್ಟಿಕ್ ನಲ್ಲಿ ಇಟ್ಟರೆ ಪ್ಲಾಸ್ಟಿಕ್ ಕರಗಿ ಆಹಾರಕ್ಕೆ ಬಿಡುಗಡೆಯಾಗುತ್ತದೆ. ಹಾಗಾಗಿ ಇವತ್ತು ಪ್ಲಾಸ್ಟಿಕ್ ಸರ್ವಂತಯಾಮಿಯಾಗಿ ನೆಲ ಜಲ, ಗಾಳಿ,ಆಹಾರಗಳಿಗೆ ಕೇಡು ಉಂಟು ಮಾಡುತ್ತಿದೆ. ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿ ತುಂಬಿಟ್ಟು,ಬಟ್ಟೆ ಚೀಲಗಳ ಬಳಕೆಗೂ ಸಹ ಡಿ. ಮಾರ್ಟ್ ಗಳು ಅಡ್ಡಿ ಮಾಡುತ್ತಿವೆ.
ಆಹಾರ ತಯಾರಿಕಾ ಕಂಪನಿಗಳು ತಮ್ಮ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಹಿಂದೆ ಪರಿಸರ ಸ್ನೇಹಿ ಕಾಗದ ಬಳಸುತ್ತಿದ್ದವು ಆದರೆ ಈಗ ತಮ್ಮ ಲಾಭಕ್ಕಾಗಿ ಪ್ಲಾಸ್ಟಿಕ್ ನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕ್ ನ್ನು ಸುಟ್ಟರೆ ಪರಿಸರ ಸ್ವಚ್ಛವಾಗುತ್ತದೆ ಎಂಬುದು ತಪ್ಪು ತಿಳುವಳಿಕೆ. ಸುಟ್ಟರೆ ಬಂಧನದಲ್ಲಿರುವ ರಾಕ್ಷಸ ನನ್ನು ಬಯಲಿಗೆ ಬಿಟ್ಟಂಟಾಗಿ ಗಾಳಿಯನ್ನು ಮಲಿನ ಮಾಡುತ್ತದೆ. ಆದ್ದರಿಂದ ಎಲ್ಲರೂ ತುರ್ತಾಗಿ ಎಚ್ಚರ ವಹಿಸಿ ಪ್ಲಾಸ್ಟಿಕ್ ನ ವೈಜ್ಞಾನಿಕ ನಿರ್ವಹಣೆ ಮಾಡಬೇಕು ಎಂದು ಕರೆ ಕೊಟ್ಟರು.
ವಿಜ್ಞಾನ ಕೇಂದ್ರದ ಕಾರ್ಯದರ್ಶಿಹಾಗೂ ನಿವೃತ್ತ ಉಪನ್ಯಾಸಕ ಸಂಪನ್ಮೂಲ ವ್ಯಕ್ತಿ ಕೆ.ರಾಜಕುಮಾರ್ ಮಾತನಾಡಿ ನಮ್ಮ ಸುತ್ತಮುತ್ತ ದೊರೆಯುವ ವ್ಯರ್ಥ ಪದಾರ್ಥಗಳನ್ನು ಬಳಸಿಕೊಂಡು ವಿಜ್ಞಾನದ ಆಟಿಕೆಗಳನ್ನು ಹೇಗೆ ತಯಾರಿಸಬಹುದು ಎಂದು ಮತ್ತು ಅದರ ಮಹತ್ವವನ್ನು ತಿಳಿಸಿ ಕೊಡುವುದರ ಮೂಲಕ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ತ್ಯಾಜ್ಯ ಪ್ಲಾಸಿಕ್ ನಿಂದ ತಯಾರಿಸಿದ ಆಟಿಕೆಗಳಿಂದ ಶೂನ್ಯ ಗುರುತ್ವದಲ್ಲಿ ತೂಕರಾಹಿತ್ಯ, ಶಬ್ದದಲ್ಲಿ ಡಾಪ್ಲರ್ ಪರಿಣಾಮ, ನ್ಯೂಟಾನ್ನನ ಚಲನೆಯ ನಿಯಮಗಳು, ಗುರುತ್ವಕೇಂದ್ರ, ಸ್ಟೇಟಸ್ಕೊಪ್ ಸಂಶೋಧನೆ, ಸೌರವ್ಯೂಹದ ಪರಿಕಲ್ಪನೆ, ಭೂಮಿಯ ಜಿಯಾಯಿಡ್ ಅಕಾರದ ಮಾದರಿ, ಇತ್ಯಾದಿ. ಮಾದರಿಗಳನ್ನು ಪ್ರದರ್ಶಿಸಿ,ವಿದ್ಯಾರ್ಥಿಗಳು ಮಾಡಿ ಕಲಿ ಎಂಬ ಪರಿಕಲ್ಪನೆಯೊಂದಿಗೆ ಬಹಳ ಉತ್ಸಾಹದಿಂದ ಕಲಿಕೆಯಲ್ಲಿ ಭಾಗವಹಿಸುವಂತೆ ಮಾಡಿದರು.
ಶಾಲಾ ಮುಖ್ಯ ಶಿಕ್ಷಕ ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಲ್ಲಿ ಸೃಜನಾತ್ಮಕತೆ ಮತ್ತು ವೈಜ್ಞಾನಿಕತೆ ಬೆಳೆಸಿಕೊಳ್ಳಲು ಚಟುವಟಿಕೆ ಆಧಾರಿತ ಕಲಿಕೆ ತುಂಬಾ ಮಹತ್ವವಾದದ್ದು ಎಂದು ತಿಳಿಸಿದರು.
ಇಂದುಶ್ರೀ ಮತ್ತು ರಮ್ಯಾ ಕೆ ಟಿ ಪ್ರಾರ್ಥಿಸಿದರು. ಶಿಕ್ಷಕ ಹನುಮಂತಪ್ಪ ಸ್ವಾಗತಿಸಿದರು. ಶಿಕ್ಷಕ ಸನಾವುಲ್ಲಾ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಅನಂತ ಪದ್ಮನಾಭ ವಂದಿಸಿದರು. ವಿಜ್ಞಾನ ಶಿಕ್ಷಕ ಮುತ್ತುರಾಜ್ ನಿರೂಪಿಸಿದರು.