ಎಲೆ ಚುಕ್ಕೆ ರೋಗ ಹಾಗೂ ಹಳದಿ ಎಲೆ ರೋಗಕ್ಕೆ ರೈತರಿಗೆ ಪರಿಹಾರ-ಸಚಿವ ಮಲ್ಲಿಕಾರ್ಜುನ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಲೆ ಚುಕ್ಕೆ ರೋಗ ಹಾಗೂ ಹಳದಿ ರೋಗಗಳಿಂದ ತೊಂದರೆಗೆ ಒಳಗಾದ ರೈತರಿಗೆ ಅದಷ್ಟು ಶೀಘ್ರವಾಗಿ ಪರಿಹಾರ ಧನ ಬಿಡುಗಡೆ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, 2023-24ನೇ ಸಾಲಿನಲ್ಲಿ ರೈತರಿಗೆ ಪ್ರತಿ ಹೆಕ್ಟೇರ್‍ಗೆ ರೂ. 4000/- ಗಳಂತೆ 1.5 ಹೆಕ್ಟೇರ್ ವರೆಗೆ ಪ್ರತಿ ಫಲಾನುಭವಿಗೆ ಗರಿಷ್ಠ ರೂ 6000/- ಮೊತ್ತದ ಸಸ್ಯ ಸಂರಕ್ಷಣಾ ಔಷಧಿಗಳನ್ನು 6250 ಹೆಕ್ಟೇರ್ ಪ್ರದೇಶಕ್ಕೆ ವಿತರಿಸಿ ರೂ. 250.00 ಲಕ್ಷಗಳ ಅನುದಾನವನ್ನು 12,300 ಅಡಿಕೆ ಬೆಳೆಗಾರರಿಗೆ ನೀಡಲಾಗಿರುತ್ತದೆ ಎಂದು ತಿಳಿಸಿದರು.

ಅಡಿಕೆ ಬೆಳೆಗಾರರಿಗೆ ಅಡಿಕೆ ಬೆಳೆಯ ಕಟಾವು ಹಾಗೂ ಸಂಪರಣೆಗಾಗಿ (ದೋಟಿ) ಖರೀದಿಸಲು ಕೃಷಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಶೇ. 40 ರಷ್ಟು ಹಾಗೂ ಪರಿಶಿಷ್ಟ ಜಾತಿ / ಪಂಗಡದವರಿಗೆ ಶೇ.50 ರಂತೆ ಸಹಾಯಧನ ನೀಡಲಾಗುತ್ತಿದೆ. 2023-24ನೇ ಸಾಲಿನಲ್ಲಿ 1201 ಫಲಾನುಭವಿಗಳಿಗೆ ರೂ 366.68 ಲಕ್ಷಗಳ ಸಹಾಯಧನ ನೀಡಲಾಗಿದೆ. ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣ ಕುರಿತು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞರ ಸಹಯೋಗದೊಂದಿಗೆ ತರಬೇತಿ ಕಾಯಾಗಾರಗಳು ಹಾಗೂ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದರ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕಾಗಿ ಹೆಕ್ಸೋಕೊನೋಜೋಲ್, ಟೆಬುಕೊನೊಜೋಲ್, ಪ್ರೋಪಿಕೊನೊಜೋಲ್ ಮತ್ತು ಪ್ರೋಪಿನೇಬ್ ಎಂಬ ಸಸ್ಯ ಸಂರಕ್ಷಣಾ ಔಧಿಗಳನ್ನು ತಜ್ಞರ ಶಿಫಾರಸಿನನ್ವಯ ಹಾನಿಯಾದ ಪ್ರದೇಶದ ರೈತರಿಗೆ ವಿತರಿಸಲಾಗುತ್ತಿದೆ. ಅಡಿಕೆ ಎಲೆ ಚುಕ್ಕೆ ರೋಗ ಹಾಗೂ ಹಳದಿ ಎಲೆ ರೋಗಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ನೇಮಿಸಿರುವ ವೈಜ್ಞನಿಕ ತಂಡದ ಸಮಿತಿಯು ಫೈಟೋಸ್ಯಾನಿಟರಿ ಕ್ರಮಗಳ ಅಳವಡಿಕೆ, ಪೋಷಕಾಂಶಗಳ ನಿರ್ವಹಣೆ, ಸಸ್ಯ ಸಂರಕ್ಷಣೆ ಔಷಧಿಗಳನ್ನು ತಜ್ಞರ ಶಿಫಾರಸ್ಸಿನನ್ವಯ ಹಾನಿಯಾದ ಪ್ರದೇಶದ ರೈತರಿಗೆ ವಿತರಿಸಲಾಗುತ್ತಿದೆ.

ಅಡಿಕೆ ಎಲೆ ಚುಕ್ಕೆ ರೋಗದಿಂದ ಹಾನಿಯಾಗಿರುವ ಸುಮಾರು 53977 ಹೆಕ್ಟೇರ್ ಪ್ರದೇಶಕ್ಕೆ ರೂ. 225.73 ಕೋಟಿಗಳ ಪ್ರಸ್ತಾವನೆಯನ್ನು ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ 60:40ರ ಅನುಪಾತದಲ್ಲಿದ್ದು, ಈ ಕಾರ್ಯಕ್ರಮವು 2 ವರ್ಷಗಳ ಅವಧಿಯದ್ದಾಗಿರುತ್ತದೆ. 202425ನೇ ಸಾಲಿಗೆ ರೂ. 112.83 ಕೋಟಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದರಲ್ಲಿ ಕೇಂದ್ರ ಪಾಲಿನ ಅನುದಾನ ರೂ. 6771.75 ಲಕ್ಷಗಳಲ್ಲಿ 3700.00 ಲಕ್ಷಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದ ಪಾಲನ್ನು ಸೇರಿಸಿ ಆದಷ್ಟು ಬೇಗ ಅನುಷ್ಠಾನ ಮಾಡಲು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

 

Share This Article
error: Content is protected !!
";