ನಡುರಸ್ತೆಯಲ್ಲಿ ಯುವತಿಗೆ ಅಡ್ಡಗಟ್ಟಿ ಇನ್‌ಸ್ಟಾಗ್ರಾಂ ಐಡಿ ನೀಡುವಂತೆ ದುರ್ವರ್ತನೆ ಆರೋಪಿ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುವತಿಯೊಬ್ಬಳನ್ನು ನಡುರಸ್ತೆಯಲ್ಲಿ ಅಡ್ಡಗಟ್ಟಿ ಇನ್‌ಸ್ಟಾಗ್ರಾಂ ಐಡಿ ನೀಡುವಂತೆ ಒತ್ತಾಯಿಸಿ ದುರ್ವರ್ತನೆ ತೋರಿದ್ದ ಆರೋಪಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯುವತಿಯ ತಾಯಿ ನೀಡಿದ ದೂರಿನನ್ವಯ ವಿನೋದ್​ ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 29ರಂದು ರಾತ್ರಿ 10:30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಯುವತಿಯನ್ನು ಟಿ.ದಾಸರಹಳ್ಳಿ ಬಳಿ ರಸ್ತೆಯಲ್ಲಿ ಅಡ್ಡಗಟ್ಟಿದ್ದ ವಿನೋದ್, ಇನ್‌ಸ್ಟಾಗ್ರಾಂ ಐಡಿ ನೀಡುವಂತೆ ಒತ್ತಾಯಿಸಿದ್ದ. ಈ ವೇಳೆ ಗಾಬರಿಗೊಂಡ ಯುವತಿ ತನ್ನ ತಾಯಿಗೆ ಕರೆ ಮಾಡಿದ್ದಳು.

ಆಕೆಯ ತಾಯಿ ಸ್ಥಳಕ್ಕೆ ಬರುವಷ್ಟರಲ್ಲಿ ರಸ್ತೆಯಲ್ಲಿ ಎಳೆದಾಡಿ ಕಿರುಕುಳ ನೀಡಿದ್ದ. ಯುವತಿಯ ತಾಯಿ ಸ್ಥಳಕ್ಕೆ ಬಂದಾಗ ಇಬ್ಬರನ್ನೂ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದ. ಬಳಿಕ ಸ್ಥಳೀಯರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಬಾಗಲಗುಂಟೆ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ದುಷ್ಕೃತ್ಯದಿಂದ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

 

 

Share This Article
error: Content is protected !!
";