ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಆನ್ ಲೈನ್ನಲ್ಲಿ ಜೂಜಾಟ ಪ್ರತಿ ಮನೆ, ಕುಟುಂಬವನ್ನೂ ಇಂದು ಕಾಡುತ್ತಿದೆ. ಆನ್ ಲೈನ್ ಜೂಜಾಡಿ 60 ಲಕ್ಷ ಸಾಲ ಮಾಡಿ ಸಾಲ ತೀರಿಸಲು ಇಂಡಿಯನ್ ಬ್ಯಾಂಕ್ ಲಾಕರ್ ನಲ್ಲಿದ್ದ 4 ಕೋಟಿ ಮೌಲ್ಯದ 2.753 ಕೆ.ಜಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದಡಿ ಅಸಿಸ್ಟೆಂಟ್ ಬ್ರ್ಯಾಂಚ್ ಮ್ಯಾನೇಜರ್ನನ್ನ ಗಿರಿನಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಕಿರಣ್ ಕುಮಾರ್ (33) ಬಂಧಿತ. ಈತನಿಂದ ಒಂದು ಕಾಲು ಕೆ.ಜಿ. ಬಂಗಾರ ವಶಕ್ಕೆ ಪಡೆದುಕೊಳ್ಳಲಾಗಿದೆ. ವಿದ್ಯಾರಣ್ಯಪುರದ ಆರೋಪಿ ಮೂಲತಃ ಆಂಧ್ರಪ್ರದೇಶದವನಾಗಿದ್ದಾನೆ. 2016ರಿಂದ ರಾಜ್ಯದ ಬ್ಯಾಂಕ್ನ ವಿವಿಧ ಶಾಖೆಗಳಲ್ಲಿ ಕೆಲಸ ಮಾಡಿದ್ದ. ಕಳೆದ ಜೂನ್ನಿಂದ ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ತೋಯಜಾಕ್ಷಿ ಎಂಬುವವರು ಆರು ತಿಂಗಳ ಹಿಂದೆ ಬ್ಯಾಂಕ್ನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು. ಸಾಲ ತೀರಿಸಿ ಒಡವೆ ಬಿಡಿಸಿಕೊಳ್ಳಲು ಇತ್ತೀಚೆಗೆ ಬ್ಯಾಂಕ್ಗೆ ಬಂದಿದ್ದರು. ಪೂರ್ಣ ಸಾಲ ಪಾವತಿಸಿ ಪ್ಯಾಕೆಟ್ನಲ್ಲಿದ್ದ ಚಿನ್ನ ಪರಿಶೀಲಿಸಿದಾಗ ಕೆಲ ಆಭರಣ ಕಾಣೆಯಾಗಿತ್ತು. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು.
ಆತಂಕಗೊಂಡ ಅಧಿಕಾರಿಗಳು ಪರಿಶೀಲಿಸಿದಾಗ ಕಳೆದ ಒಂದು ವರ್ಷದಿಂದ ಗೋಲ್ಡ್ ಲೋನ್ ಮಂಜೂರು ಮಾಡಲಾಗಿದ್ದ 207 ಪ್ಯಾಕೇಟ್ಗಳಲ್ಲಿ ಸುಮಾರು 21 ಪ್ಯಾಕೇಟ್ಗಳಲ್ಲಿ ಪ್ರಾಯಶಃ ಚಿನ್ನ ಕಾಣೆಯಾಗಿದ್ದರೆ, 3 ಪ್ಯಾಕೇಟ್ ಗಳಲ್ಲಿ ಚಿನ್ನ ನಾಪತ್ತೆಯಾಗಿತ್ತು. ಒಟ್ಟು 2.783 ಕೆ.ಜಿ ಚಿನ್ನ ಕಳವಾಗಿರುವುದು ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ತನಿಖೆ ನಡೆಸಿದಾಗ ಆರೋಪಿ ಕಿರಣ್ ಬ್ಯಾಂಕ್ನ ವಲಯ ಕಚೇರಿಗೆ ಹಾಜರಾಗಿ ಕಳ್ಳತನವೆಸಗಿರುವುದಾಗಿ ಒಪ್ಪಿಕೊಂಡಿದ್ದ. ಚಿನ್ನವನ್ನ ಕತ್ರಿಗುಪ್ಪೆಯ ಮಣಪುರಂ ಹಾಗೂ ಎಂ. ಎಸ್. ಪಾಳ್ಯದ ಮುತ್ತೂಟ್ ಪೈನಾನ್ಸ್ನಲ್ಲಿ ಅಡವಿಟ್ಟಿರುವುದಾಗಿ ಬಾಯ್ಬಿಟ್ಟಿದ್ದ. ಈ ಕುರಿತು ಬಂದ ದೂರು ಆಧರಿಸಿ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಆನ್ ಲೈನ್ ಸಾಲ ತೀರಿಸಲು ಕಳವು :
ಆನ್ಲೈನ್ ಜೂಜು ಹಾಗೂ ಬೆಟ್ಟಿಂಗ್ ವ್ಯಾಮೋಹಕ್ಕೆ ಅಂಟಿಕೊಂಡಿದ್ದ ಕಿರಣ್, ಹಲವು ವರ್ಷಗಳಿಂದ ಆನ್ಲೈನ್ನಲ್ಲಿ ಜೂಜಾಡುತ್ತಿದ್ದ. 60 ಲಕ್ಷದವರೆಗೆ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡಿದ್ದ. ಮಾಡಿದ ಸಾಲದಿಂದ ಹೊರಬರಲು ಆರು ತಿಂಗಳಲ್ಲಿ ಹಂತ – ಹಂತವಾಗಿ 4 ಕೋಟಿ ಮೌಲ್ಯದ ಚಿನ್ನ ಕದ್ದು ಅಡವಿಟ್ಟು ಬಂದ ಹಣದಿಂದ ಕೊಂಚ ಸಾಲ ತೀರಿಸಿದ್ದ. ಸದ್ಯ ಒಂದು ಕಾಲು ಕೆ. ಜಿ. ವಶಕ್ಕೆ ಪಡೆದುಕೊಂಡು ಆರೋಪಿಯನ್ನ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

