ಋತುಚಕ್ರ ಕಡ್ಡಾಯ ರಜೆ ಮಹಿಳೆಯರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು-ಸುಪ್ರೀಂ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ಕಡ್ಡಾಯ ರಜೆ ಕಾನೂನು ಮಹಿಳೆಯರ ವೃತ್ತಿ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ಋತುಚಕ್ರ ಕಡ್ಡಾಯ ರಜೆ ಕುರಿತು ನಿಯಮಗಳನ್ನು ರೂಪಿಸಲು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ಶೈಲೇಂದ್ರ ಮಣಿ ತ್ರಿಪಾಠಿ ಎಂಬವರ ಪರವಾಗಿ ಹಿರಿಯ ವಕೀಲ ಎಂ.ಆರ್.ಶಂಶಾದ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.

- Advertisement - 

ಋತುಚಕ್ರ ಕಡ್ಡಾಯ ರಜೆ ಕಾನೂನು ರೂಪಿಸುವ ಮೊದಲು ಉದ್ಯೋಗ ಮಾರುಕಟ್ಟೆಯ ಪ್ರಾಯೋಗಿಕ ವಾಸ್ತವಗಳನ್ನು ಪರಿಗಣಿಸುವ ಅಗತ್ಯವಿದೆ. ಜೊತೆಗೆ, ಈ ಕುರಿತು ಮಹಿಳೆಯರಲ್ಲಿ ಕೀಳರಿಮೆ ಭಾವನೆ ಉಂಟಾಗದಂತೆ ನೋಡಿಕೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.

ಮಹಿಳೆಯರು ಕೆಲವು ನೈಸರ್ಗಿಕ ಸಮಸ್ಯೆಗಳಿಂದ ಪುರುಷರೊಂದಿಗೆ ಸಮನಾಗಿರಲು ಸಾಧ್ಯವಿಲ್ಲ. ಜೊತೆಗೆ, ಒಂದು ನಿರ್ದಿಷ್ಟ ಸಮಯದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಇದು ಮೂಡಿಸಲಿದೆ ಎಂದು ಸಿಜೆಐ ಅಭಿಪ್ರಾಯಪಟ್ಟರು.

- Advertisement - 

ಮಾನವ ಸಂಪನ್ಮೂಲ ಕಡಿಮೆ ಇದ್ದರೆ, ಆಯ್ಕೆಯ ಸಾಧ್ಯತೆ ಕಡಿಮೆಯಾಗುತ್ತದೆ. ಉದ್ಯೋಗ ಮಾರುಕಟ್ಟೆಯ ಪ್ರಾಯೋಗಿಕ ವಾಸ್ತವತೆಯನ್ನು ಪರಿಗಣಿಸಬೇಕು. ಈ ಎಲ್ಲ ಅಂಶಗಳನ್ನೂ ಪರಿಶೀಲಿಸಬೇಕು. ವ್ಯವಹಾರದ ದೃಷ್ಟಿಯಿಂದಲೂ ಇದನ್ನು ನೋಡಬೇಕಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ತಿಳಿಸಿದರು.

ಅರ್ಜಿದಾರರು ಸೂಚಿಸಿದಂತೆ ತಿಂಗಳಿಗೆ ಮೂರು ಅಥವಾ ನಾಲ್ಕು ದಿನಗಳ ರಜೆ ತೆಗೆದುಕೊಳ್ಳುವ ಕಾನೂನು ರಚಿಸಿದರೆ, ಅದು ಮಹಿಳೆಯರ ವೃತ್ತಿಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸಿಜೆಐ ಮೌಖಿಕವಾಗಿ ಅಭಿಪ್ರಾಯಪಟ್ಟರು.

ಇದಕ್ಕೆ ವಾದಿಸಿದ ವಕೀಲರು, ಅರ್ಜಿದಾರರು ಎರಡು ದಿನ ರಜೆಗೆ ಮನವಿ ಮಾಡಿದ್ದಾರೆ. ಜೊತೆಗೆ ಈಗಾಗಲೇ ಒಡಿಶಾ, ಕರ್ನಾಟಕ ರಾಜ್ಯಗಳಲ್ಲಿ ಈ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. 2013ರಲ್ಲಿ ಕೇರಳ ಸರ್ಕಾರವು ಸರ್ಕಾರದ ಎಲ್ಲ ವಿವಿಗಳ ವಿದ್ಯಾರ್ಥಿಗಳಿಗೆ ಈಗಾಗಲೇ ರಜೆ ನೀಡಿದೆ ಎಂದು ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟರು.

ಅರ್ಜಿದಾರರು ಉದ್ಯೋಗ ಸ್ಥಳದಲ್ಲಿ ಸೃಷ್ಟಿಯಾಗುವ ಮನಸ್ಥಿತಿಯ ಬಗ್ಗೆ ಅರ್ಥಮಾಡಿಕೊಳ್ಳಬೇಕು ಎಂದು ಸಿಜೆಐ ತಿಳಿಸಿದರು.
ಆಗ ವಕೀಲರು
, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಪರಿಗಣಿಸಿ ಖಾಸಗಿ ಕಂಪನಿಗಳು ಸ್ವಯಂಪ್ರೇರಣೆಯಿಂದ ರಜೆ ನೀಡಿವೆ ಎಂದು ವಾದಿಸಿದರು. ಬಳಿಕ ಖಾಸಗಿ ಕಂಪನಿಗಳು ಸ್ವಯಂಪ್ರೇರಣೆಯಿಂದ ರಜೆ ನೀಡುವುದನ್ನು ಸಿಜೆಐ ಶ್ಲಾಘಿಸಿದರು.

ಋತುಚಕ್ರ ರಜೆಯ ಕಡ್ಡಾಯ ಷರತ್ತು ಕಾನೂನು ಮಾಡಿದ್ರೆ ಮಹಿಳೆಯರ ವೃತ್ತಿ ಜೀವನಕ್ಕೆ ಎಷ್ಟು ಹಾನಿ ಮಾಡಲಿದ್ದೀರಿ ಎಂಬುದು ನಿಮಗೆ ಗೊತ್ತಿಲ್ಲ. ಆಗ ಯಾರೂ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

ವಾದ ಆಲಿಸಿದ ಬಳಿಕ ಪೀಠವು, ಮಹಿಳೆಯರಿಗೆ ವೇತನ ಸಹಿತ ಋತು ಚಕ್ರ ರಜೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿತು. ಜೊತೆಗೆ ಈ ಕುರಿತು ಸಮಾಲೋಚಿಸಿ ಋತುಚಕ್ರ ರಜೆ ಕಾನೂನು ರೂಪಿಸುವಾಗ ಅರ್ಜಿದಾರರ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಸುಪ್ರೀಂ ತಿಳಿಸಿದೆ.

Share This Article
error: Content is protected !!
";