ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಪರಸ್ಪರ ಪ್ರೀತಿಸುತ್ತಿದ್ದ ಮಂಗಳಮುಖಿ ಮತ್ತು ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ನಗರದ ಕೆಎಂಎಫ್ ಡೈರಿ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ಬೆಳಕಿಗೆ ಬಂದಿದೆ.
ಬಾಡಿಗೆ ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದೆ. ಮೃತರನ್ನು ಮಂಗಳಮುಖಿ ಸುಹಾಸಿನಿ(29) ಹಾಗೂ ಶೇಖರ್ ಅಲಿಯಾಸ್ ಮಣಿ (31) ಎಂದು ಗುರುತಿಸಲಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲ್ಪನಗುಡಿ ಗ್ರಾಮದ ಶೇಖರ್, ಆಟೋ ಚಾಲಕರಾಗಿ ಜೀವನ ನಡೆಸುತ್ತಿದ್ದ. ಸುಹಾಸಿನಿ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದವರಾಗಿದ್ದರು.
ಇಬ್ಬರೂ ಕಳೆದ ಆರು ವರ್ಷಗಳಿಂದ ಒಟ್ಟಿಗೆ ವಾಸವಾಗಿದ್ದರು. ಸುಹಾಸಿನಿ ಮಂಗಳಮುಖಿ ಎಂದು ಗೊತ್ತಿದ್ದರೂ ಶೇಖರ್ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ಕುರಿತು ಮಾಹಿತಿ ಪಡೆದರು. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಪ್ರಕರಣ ಸಂಬಂಧ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮಂಗಳಮುಖಿಯರ ಗಂಭೀರ ಆರೋಪ-
ಮಂಗಳಮುಖಿ ಸಮುದಾಯದ ಸದಸ್ಯರು ಶೇಖರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಹಣಕ್ಕಾಗಿ ಸುಹಾಸಿನಿಯ ಜೊತೆ ಇದ್ದ ಶೇಖರ್, ನಂತರ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮಂಗಳಮುಖಿಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಆದರೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಾವಿನ ನಿಖರ ಕಾರಣ ಮರಣೋತ್ತರ ವರದಿ ನಂತರವೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

