ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಟ್ಟಿನ ಸಂದರ್ಭದಲ್ಲಿ ಮಹಿಳೆಯನ್ನು ದೂರ ಇಡುವುದು, ಆಕೆಯನ್ನು ಅಶುಭ ಎಂದು ಭಾವಿಸುವುದು ಬಹಳ ದೊಡ್ಡ ತಪ್ಪು. ಅಲ್ಲದೇ ಋತು ಚಕ್ರದ ಸಂದರ್ಭದಲ್ಲಿ ಮಹಿಳೆಯರು ಶುಚಿತ್ವ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.
ನಗರದ ಚಳ್ಳಕೆರೆ ರಸ್ತೆಯ ಪದ್ಮಾವತಿ ನರ್ಸಿಂಗ್ ಕಾಲೇಜಿನಲ್ಲಿ ಬುಧವಾರ ಆರೋಗ್ಯ ಇಲಾಖೆ ವತಿಯಿಂದ ವಿಶ್ವ ಋತುಚಕ್ರ ನೈರ್ಮಲ್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಮಾಹಿತಿ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣಿನ ಜೀವನದಲ್ಲಿ ಋತುಚಕ್ರ ಬಹಳ ಪ್ರಮುಖ ಘಟ್ಟ. ಋತುಚಕ್ರದಿಂದ ಹುಡುಗಿ ಯುವತಿಯಾಗಿ ಬಡ್ತಿ ಪಡೆಯುತ್ತಾಳೆ. ನಂತರ ಆ ಯುವತಿ ಮದುವೆಯಾದ ಮೇಲೆ ಮಹಿಳೆಯಾಗಿ ಬದಲಾಗುತ್ತಾಳೆ. ಈ ಋತುಚಕ್ರ ಮಹಿಳೆ ಗರ್ಭ ಧರಿಸಲು ಅತ್ಯಗತ್ಯ ಕ್ರಿಯೆ. ಹಾಗಾಗಿ ಹೆಣ್ಣಾಗಿ ಹುಟ್ಟಿದ ಮೇಲೆ ಪಿರಿಯಡ್ಸ್ ಅಥವಾ ಋತುಚಕ್ರ ನೈಸರ್ಗಿಕ ಕ್ರಿಯೆಯನ್ನು ಅನುಭವಿಸಲೇಬೇಕು ಎಂದರು.
ಮುಟ್ಟಿನ ಸಮಯದಲ್ಲಿ ನಿಮ್ಮ ದೇಹವನ್ನು ಕಾಳಜಿ ವಹಿಸುವ ಸಾಮಥ್ರ್ಯವು ಈ ಮೂಲಭೂತ ಸ್ವಾತಂತ್ರ್ಯದ ಅತ್ಯಗತ್ಯ ಭಾಗವಾಗಿದೆ. ನಿಷೇಧಗಳನ್ನು ಮುರಿದು ಮುಟ್ಟಿನ ಸುತ್ತಲಿನ ಕಳಂಕವನ್ನು ಕೊನೆಗೊಳಿಸಿ ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಮಾತನಾಡಿ, ಮುಟ್ಟಿನ ಉತ್ಪನ್ನಗಳ ಪ್ರವೇಶ, ಮುಟ್ಟಿನ ಬಗ್ಗೆ ಶಿಕ್ಷಣ ಮತ್ತು ಅವಧಿ ಸ್ನೇಹಿ ನೈರ್ಮಲ್ಯ ಸೌಲಭ್ಯಗಳ ಬಗ್ಗೆ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಿದರು. ಮುಟ್ಟಿನ ಬಗ್ಗೆ ಅರಿವು ಮೂಡಿಸುವುದು ಮತ್ತು ಮುಟ್ಟಿನ ಸ್ವಚ್ಛತೆ ಇಂದಿನ ಅಗತ್ಯವಾಗಿದೆ. ಸುರಕ್ಷಿತ ಮುಟ್ಟಿನ ನೈರ್ಮಲ್ಯ ಅಭ್ಯಾಸಗಳನ್ನು ಉತ್ತೇಜಿಸುವ ಮೂಲಕ ಮಹಿಳೆಯರ ಆರೋಗ್ಯವನ್ನು ಖಚಿತಪಡಿಸಿಕೊಳ್ಳೋಣ ಎಂದು ಹೇಳಿದರು.
ಶಿಕ್ಷಣದ ಕೊರತೆ, ನಿರಂತರ ನಿಷೇಧಗಳು ಮತ್ತು ಕಳಂಕ, ನೈರ್ಮಲ್ಯ ಮುಟ್ಟಿನ ಉತ್ಪನ್ನಗಳಿಗೆ ಸೀಮಿತ ಪ್ರವೇಶ ಮತ್ತು ಕಳಪೆ ನೈರ್ಮಲ್ಯ ಮೂಲಸೌಕರ್ಯ, ಆರೋಗ್ಯ, ಪ್ರಪಂಚದಾದ್ಯಂತ ಮಹಿಳೆಯರು ಮತ್ತು ಹುಡುಗಿಯರ ಒಟ್ಟಾರೆ ಸ್ಥಿತಿಯಿಂದಾಗಿ ಕಳಪೆ ಮುಟ್ಟಿನ ಚಕ್ರ ಉಂಟಾಗುತ್ತದೆ ಎಂದು ನಮಗೆ ತಿಳಿದಿದೆ. ಇದರಿಂದಾಗಿ ಲಕ್ಷಾಂತರ ಹುಡುಗಿಯರು ಮತ್ತು ಮಹಿಳೆಯರು ತಮ್ಮ ಸಾಮಥ್ರ್ಯವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಆಶಾ ಭೋಧಕಿ ತಬಿತಾ, ಕಾಲೇಜಿನ ಪ್ರಾಂಶುಪಾಲ ವೆಂಕಟೇಶ, ಉಪನ್ಯಾಸಕರಾದ ರೇಣುಕಾ, ಗಂಗಮ್ಮ, ವೆಂಕಟೇಶ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.