ಕಿಶೋರಿಯರು ಶುಚಿ ಪ್ಯಾಡ್ ಬಳಕೆ ಮಾಡಿ ರೋಗಗಳಿಂದ ಮುಕ್ತರಾಗಿ-ಮಂಜುನಾಥ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಿಶೋರಿಯರು ಶುಚಿ ಪ್ಯಾಡ್ ಬಳಕೆ ಮಾಡಿ ಹಲವಾರು ರೋಗಗಳಿಂದ ಮುಕ್ತರಾಗಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.

ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಸೋಮವಾರ ಕಿಶೋರಿಯರಿಗೆ ಆರೋಗ್ಯ ಅರಿವು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದು ‘ಶುಚಿ’ ಎಂಬ ಹೆಸರಿನ ಸರ್ಕಾರಿ ಕಾರ್ಯಕ್ರಮ. 10 ರಿಂದ 19 ವಯಸ್ಸಿನ ಕಿಶೋರಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ಒದಗಿಸುವ ಅತ್ಯುಪಯುಕ್ತವಾದ ಯೋಜನೆ. ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳು, ಹಾಸ್ಟೆಲ್‍ಗಳಲ್ಲಿನ ಹೆಣ್ಣು ಮಕ್ಕಳಿಗೆ ಪ್ರತೀ ತಿಂಗಳು ತಲಾ ಹತ್ತು ಸ್ಯಾನಿಟರಿ ಪ್ಯಾಡ್ ಒಳಗೊಂಡ 12 ಪ್ಯಾಕ್‍ಗಳನ್ನು ಇಡೀ ವರ್ಷಕ್ಕಾಗಿ ನೀಡಲಾಗುತ್ತಿತ್ತು.

ವಿತರಿಸಿ ಉಳಿದ ಪ್ಯಾಡ್‍ಗಳನ್ನು ಶಾಲಾ ಕಾಲೇಜುಗಳಲ್ಲಿ ಸಂಗ್ರಹಿಸಿಟ್ಟು ವಿದ್ಯಾರ್ಥಿನಿಯರಿಗೆ ಅವಶ್ಯಕತೆ ಬಿದ್ದಾಗ ನೀಡಲಾಗುತ್ತದೆ ಎಂದರು.

 ಶುಚಿ ಯೋಜನೆಯನ್ನು ಪದವಿ ಮತ್ತು ಸ್ನಾತಕೋತ್ತರ ಪದವಿ ಓದುವ ಹೆಣ್ಣು ಮಕ್ಕಳಿಗೂ ವಿಸ್ತರಿಸಬೇಕೆಂಬ ಆಲೋಚನೆ ಇದೆ. ಋತುಸ್ರಾವದ ಸಮಯದಲ್ಲಿ ಅರಿವಿದ್ದೋ ಇಲ್ಲದೆಯೋ ಕಿಶೋರಿಯರು ನೈರ್ಮಲ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದರಲ್ಲಿ ಹಿಂದೆಯೇ ಇದ್ದಾರೆ. ದುಬಾರಿಯಾಗಿರುವ ಸ್ಯಾನಿಟರಿ  ಪ್ಯಾಡ್‍ಗಳು ಎಲ್ಲರ ಕೈಗೂ ಎಟಕುವುದಿಲ್ಲ.

ಹೀಗಾಗಿ ಬಟ್ಟೆಯನ್ನು ಉಪಯೋಗಿಸಿ ಅದನ್ನು ಮರುಬಳಕೆ ಮಾಡುವುದು ಸರ್ವೇ ಸಾಮಾನ್ಯ. ಮುಟ್ಟು ಎನ್ನುವ ಪದವನ್ನೇ ಉಪಯೋಗಿಸುವಲ್ಲಿ ಹಿಂಜರಿಕೆ ಇರುವ ನಮ್ಮ ಸಮಾಜದಲ್ಲಿ ಮುಟ್ಟಿನ ಬಟ್ಟೆಗಳನ್ನು ಎಷ್ಟು ಅನಾರೋಗ್ಯಕರ ರೀತಿಯಲ್ಲಿ ಒಣಗಿಸುತ್ತಾರೆಂಬುದು ಯಾರಿಗೂ ತಿಳಿಯದ ವಿಚಾರವೇನಲ್ಲ. ಮುಟ್ಟಿನ ಪ್ರಕ್ರಿಯೆ ಸರಿಯಾದ ಶುಚಿತ್ವದಿಂದ ಕೂಡಿದ್ದರೆ ಹಲವಾರು ರೋಗಗಳು ಬಾರದಂತೆ ತಡೆಗಟ್ಟಬಹುದು ಎಂದರು.

 ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಆರ್ ಕೆ ಎಸ್ ಕೆ ಸಮಾಲೋಚಕರು ನಿಮ್ಮ ಸೇವೆಗಾಗಿ ಸ್ನೇಹ ಕ್ಲಿನಿಕ್ ನಡೆಸುತ್ತಾರೆ. ಉಚಿತವಾಗಿ ಮಾಹಿತಿಗಳನ್ನ ನೀಡುವುದಲ್ಲದೆ ವೈದ್ಯರಿಂದ ಚಿಕಿತ್ಸೆಯನ್ನು ಕೊಡಿಸುತ್ತಾರೆ. ಈ ವಸತಿ ನಿಲಯದಲ್ಲಿ ಸಾವಿರ ಸಂಖ್ಯೆಯಲ್ಲಿ ಇರುವ ವಿದ್ಯಾರ್ಥಿನಿಯರು ತಮ್ಮ ಆಧಾರ್ ಕಾರ್ಡ್ ತೋರಿಸಿ ವರ್ಷಕ್ಕೆ ಆಗುವಷ್ಟು ಶುಚಿ ಪ್ಯಾಡ್‍ಗಳನ್ನ ಪಡೆಯಿರಿ ಎಂದರು.

 ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಅವರು ಬಳಸಿದ ಶುಚಿ ನ್ಯಾಪ್ಕಿನ್ ಪ್ಯಾಡ್‍ಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕು ಎಂಬುದನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಿರಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ರೂಪ ಅವರು ವಿದ್ಯಾರ್ಥಿನಿಯರಿಗೆ ಶುಚಿ ಪ್ಯಾಡ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಸಿರಬಾನು, ಆರ್‍ಕೆ ಎಸ್‍ಕೆ ಕನ್ಸಲ್ಟೆಂಟ್ ಕಾವ್ಯ, ಸಮುದಾಯ ಆರೋಗ್ಯ ಅಧಿಕಾರಿ ರಶ್ಮಿ, ವಸತಿ ನಿಲಯದ ಶಿಕ್ಷಕಿಯರಾದ ಆಶಾ, ನಿರ್ಮಲ, ನಸಿರ್ಂಗ್ ಅಧಿಕಾರಿ ನಾಗವೇಣಿ, ಪ್ರಥಮ ದರ್ಜೆ ಸಹಾಯಕಿ ಮಂಜುಳಾ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";