ಮಹಾಲಕ್ಷ್ಮಿ ಕೊಲೆ ಪ್ರಕರಣದ ಫ್ರಿಡ್ಜ್  ಮೇಲೆ ಹಲವು ಬೆರಳಚ್ಚಿನ ಗುರುತುಗಳು ಪತ್ತೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಹಾಲಕ್ಷ್ಮಿ ಹತ್ಯೆ ಪ್ರಕರಣ ಸಂಬಂಧ ವೈದ್ಯರು ಮರಣೋತ್ತರ ಪರೀಕ್ಷೆ ವರದಿ ಸಲ್ಲಿಕೆ ಮಾಡಲಿದ್ದಾರೆ.
ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಫ್ರಿಡ್ಜ್ ಕಳುಹಿಸಿದ್ದರು. ಆದರೆ ಫ್ರಿಡ್ಜ್  ಮೇಲೆ ಹಲವು ಬೆರಳಚ್ಚಿನ ಗುರುತುಗಳು ಪತ್ತೆ ಆಗಿರುವುದು ತನಿಖೆಯಿಂದ ಗೊತ್ತಾಗಿದೆ.

ಈ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರಿಂದ ಪೊಲೀಸರು ಮಾಹಿತಿ ಪಡೆದುಕೊಂಡು ಪೊಲೀಸರು ಹಲವು ಕೋನಗಳಿಂದ ತನಿಖೆ ಆರಂಭಿಸಿದ್ದಾರೆ.

ಮಹಾಲಕ್ಷ್ಮಿ ಕೊಲೆ ಪ್ರಕರಣದಲ್ಲಿ ಒಬ್ಬ ಹಂತಕ ಇದ್ದಾನಾ? ಅಥವಾ ಹಲವು ಇದ್ದಾರಾ ಅನ್ನೋ ಬಗ್ಗೆ ಕುತೂಹಲ ಹುಟ್ಟಿದೆ. ಎಫ್‌ಎಸ್‌ಎಲ್ ತಜ್ಞರು ಶೋಧ ಮುಂದುವರಿಸಿದ್ದಾರೆ.

ಮಹಾಲಕ್ಷ್ಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವೈಯಾಲಿಕಾವಲ್ ಪೊಲೀಸರು ಶಂಕಿತ ಹಂತಕನ ಸಹೋದರನನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ. ಕೊಲೆ ಮಾಡಿ ಕರೆ ಮಾಡಿದ್ದರ ಬಗ್ಗೆ ಶಂಕಿತ ಹಂತಕನ ಸಹೋದರ ಮಾಹಿತಿ ನೀಡಿರೋದಾಗಿಯೂ ತಿಳಿದುಬಂದಿದೆ. ಸುಮಾರು ೩೦ ತುಂಡುಗಳನ್ನಾಗಿ ಕತ್ತರಿಸಿದ ಬಳಿಕ ಸಹೋದರನಿಗೆ ಕಾಲ್ ಮಾಡಿ ಹೇಳಿದ್ದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಕೊಲೆಯಾಗಿರುವ ಮಹಾಲಕ್ಷ್ಮಿ ಹಾಗೂ ಶಂಕಿತ ಹಂತಕ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಮಲ್ಲೇಶ್ವರಂನ ಬಟ್ಟೆ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಕಾರಣಾಂತರಗಳಿಂದ ಶಂಕಿತ ಹಂತಕ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ.

ಹಂತಕ ಕೆಲಸ ಬಿಟ್ಟ ಬಳಿಕ ತನ್ನಿಂದ ಅಂತರ ಕಾಯ್ದುಕೊಳ್ತಾ ಇದ್ದಾಳೆ ಅನ್ನೋ ಅನುಮಾನ ಆತನಲ್ಲಿ ಹುಟ್ಟಿಕೊಂಡಿದ್ದು ಆಗಾಗ ಈ ವಿಚಾರವಾಗಿ ಇಬ್ಬರ ಮದ್ಯೆ ಗಲಾಟೆಯೂ ನಡೆದಿತ್ತು ಎನ್ನಲಾಗಿದೆ. ಇಬ್ಬರ ನಡುವಿನ ಸಂಬಂಧದಲ್ಲಿ ದೊಡ್ಡ ಮಟ್ಟದ ಬಿರುಕು ಕಾಣಿಸಿಕೊಂಡಿದ್ದರಿಂದ ಶಂಕಿತ ಹಂತಕ ಭೀಕರವಾಗಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -  - Advertisement -  - Advertisement - 
Share This Article
error: Content is protected !!
";