ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಗಡಿ ಭಾಗದ ರೇಷ್ಮೆ ನಾಡಾದ ಮೊಳಕಾಲ್ಮೂರು ತಾಲೂಕಿನಲ್ಲಿಯೂ ವರುಣನ ಅಬ್ಬರಕ್ಕೆ ರಂಗಯ್ಯನದುರ್ಗ ಜಲಾಶಯ ಸೇರಿದಂತೆ ಬಹುತೇಕ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದು ಅಪಾರ ಪ್ರಮಾಣದ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ರೈತರ ಬೆಳೆ ಹಾನಿಯಾಗಿದೆ.
ಮೊಳಕಾಲ್ಮೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ದಿನ ನಿತ್ಯವೂ ಧಾರಾಕಾರವಾಗಿ ಸುರಿಯುವ ಮಳೆಯಿಂದ ತಾಲೂಕಿನ ದೇವಸಮುದ್ರ, ಬಿ.ಜಿ.ಕೆರೆಯ ಬಸವೇಶ್ವರ ನಗರ, ರಾಯಾಪುರ, ಗುಂಡ್ಲೂರು ಸೇರಿದಂತೆ ನಾನಾ ಗ್ರಾಮಗಳಲ್ಲಿ ಮಳೆ ನೀರು ಹರಿದು ರೈತರ ಬೆಳೆ ಹಾಗೂ ಬಹುತೇಕ ಮನೆಗಳು ಭಾಗಶಃ ಹಾನಿಯಾಗಿದ್ದು, ತಾಲೂಕಿನ ಜನತೆ ಕಂಗಾಲಾಗಿದ್ದಾರೆ.
ತಾಲೂಕಿನ ರಂಗಯ್ಯನದುರ್ಗ ಜಲಾಶಯಕ್ಕೆ ಚಿನ್ನಹಗರಿ ನದಿಯು ಮೈ ದುಂಬಿ ಹರಿಯುತ್ತಿರುವುದರಿಂದ ಕೆಲ ದಿನಗಳ ಹಿಂದೆ ರಂಗಯ್ಯನದುರ್ಗ ಜಲಾಶಯವು ೨ ನೇ ಬಾರಿಗೆ ಸಂಪೂರ್ಣ ಭರ್ತಿಯಾಗಿದೆ. ರಂಗಯ್ಯನದುರ್ಗ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯದ ೫ ಕ್ರಸ್ಟ್ ಗೇಟ್ ಗಳನ್ನು ಎತ್ತಿ ಅಪಾರ ಪ್ರಮಾಣದ ನೀರು ಚಿನ್ನಹಗರಿ ನದಿಗೆ ಹೊರ ಬಿಡಲಾಗಿದೆ.
ಚಿನ್ನಹಗರಿ ನದಿಗೆ ಹೊರ ಬಿಟ್ಟ ಅಪಾರ ಪ್ರಮಾಣದ ನೀರು ತಾಲೂಕಿನ ನಾಗಸಮುದ್ರ ಕೆರೆ, ಅಶೋಕ ಸಿದ್ದಾಪುರ ಕೆರೆ , ಅಮಕುಂದಿ ಕೆರೆ , ಭಟ್ರಹಳ್ಳಿ ಕೆರೆ, ಗೌರಸಮುದ್ರ ಕೆರೆ ಹಾಗೂ ಇನ್ನಿತರ ಕೆರೆಗಳಿಗೆ ಹರಿದು ಕೆರೆಗಳು ತುಂಬಿ ಕೋಡಿ ಬಿದ್ದಿವೆ.
ತಾಲೂಕಿನಲ್ಲಿಯೂ ಧಾರಾಕಾರವಾಗಿ ಸುರಿಯುವ ಮಳೆಗೆ ಫಕ್ಕುರ್ತಿ ಕೆರೆ, ಕೋನಸಾಗರ ಕೆರೆ, ದೇವಸಮುದ್ರದ ಕೆರೆ, ತುಪ್ಪದಕ್ಕನಹಳ್ಳಿ ಕೆರೆ, ಕೋತಲಗೊಂದಿ ಕೆರೆ , ಕೂಗೆಗುಡ್ಡದಕೆರೆ ಸೇರಿದಂತೆ ಇನ್ನಿತರ ಕೆರೆಗಳು ಹಾಗೂ ದವಳಪ್ಪನಕುಂಟೆ, ಮೋಟಮಲ್ಲಯ್ಯನಕುಂಟೆ ಇನ್ನಿತರ ಕುಂಟೆಗಳೆಲ್ಲವೂ ತುಂಬಿ ಕೋಡಿ ಬಿದ್ದು ಹೆಚ್ಚಿನ ಪ್ರಮಾಣದ ನೀರು ಹೊರ ಹರಿಯುತ್ತಿದೆ.
ಆದರೆ ವಿಪರ್ಯಾಸವೆಂದರೆ ರಂಗಯ್ಯನದುರ್ಗ ಜಲಾಶಯದ ಹಿರೇಕೆರೆಹಳ್ಳಿ ಕೆರೆಗೆ ಹರಿಯುವ ನೀರಿನ ತೂಬು ಮರಳಿನ ಚೀಲಗಳಿಂದ ಮುಚ್ಚಿರುವುದಲ್ಲದೆ ತೂಬಿನ ಯಂತ್ರದ ಪರಿಕರವು ಕಟ್ ಆಗಿರುವುದರಿಂದ ನೀರು ಹರಿಯದ ಕಾರಣ ಹಿರೇಕೆರೆಹಳ್ಳಿ ಕೆರೆ ಮಾತ್ರ ತುಂಬದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ರಂಗಯ್ಯನದುರ್ಗ ಜಲಾಶಯದಿಂದ ಹಿರೇಕೆರೆಹಳ್ಳಿ ಕೆರೆಗೆ ಹರಿಯುವ ನೀರಿನ ತೂಬಿನ ದುರಸ್ಥಿ ಕಾರ್ಯಕ್ಕೆ ಮುಂಬೈ ಮೂಲದ ಮುಳುಗು ತಜ್ಞರನ್ನು ಕರೆಯಿಸಿ ದುರಸ್ಥಿ ಕಾರ್ಯ ಭರದಿಂದ ನಡೆಯುತ್ತಿದೆ.
ತಾಲೂಕಿನಲ್ಲಿ ವರುಣ ಆರ್ಭಟ ಹೆಚ್ಚಾಗಿರುವುದರಿಂದ ಅಪಾರ ಪ್ರಮಾಣದ ನೀರು ತಾಲೂಕಿನ ಬಿ.ಜಿ.ಕೆರೆ, ದೇವಸಮುದ್ರ ಗ್ರಾಮಗಳ ಕೆಲವೆಡೆ ಮನೆಗಳಿಗೆ ನುಗ್ಗಿರುವುದರಿಂದ ಭಾಗಶಃ ಮನೆಗಳು ಹಾನಿಯಾಗಿದ್ದು, ಮನೆಯ ಬಳಕೆಯ ಆಹಾರ ಹಾಗೂ ಇನ್ನಿತರ ಪರಿಕರಗಳು ಕೊಚ್ಚಿಹೋಗಿವೆ.
ತಾಲೂಕಿನಲ್ಲಿ ಸುರಿಯುವ ಮಳೆಗೆ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ೧, ಜಂಬಲಮಲ್ಕಿ ಗ್ರಾಮದಲ್ಲಿ ೧, ರಾಂಪುರ – ೨, ಚಿಕ್ಕೋಬನಹಳ್ಳಿ -೧, ಗುಡ್ಡದಹಳ್ಳಿ-೧, ಬಿ.ಜಿ.ಕೆರೆ-೨, ಎಸ್.ಹನುಮಾಪುರ-೧, ದಡಗೂರು-೧, ಸಿದ್ದಾಪುರ-೧, ಚಿಕ್ಕುಂತಿ-೧, ಸೂರಮ್ಮನಹಳ್ಳಿ-೨ ಒಟ್ಟು ೧೪ ವಾಸದ ಮನೆಗಳು ಭಾಗಶಃ ಬಿದ್ದು ಹಾನಿಯಾಗಿದ್ದು, ಮನೆಹಾನಿಗೊಳಗಾದ ಕುಟುಂಬಸ್ಥರ ವಾಸಕ್ಕೆ ಸಂಕಷ್ಟ ಎದುರಾಗಿದೆ.
ತಾಲೂಕಿನಲ್ಲಿ ವರುಣನ ಆರ್ಭಟಕ್ಕೆ ತಾಲೂಕಿನ ಜಮೀನುಗಳಲ್ಲಿ ಹೆಚ್ಚಿನ ನೀರಿನಿಂದ ತುಂಬಿಕೊಂಡು ಪ್ರಮುಖ ಬೆಳೆ ಶೇಂಗಾ ವು ಬೂದಿ ರೋಗ ಕಾಣಿಸಿಕೊಂಡಿರುವುದಲ್ಲದೆ , ಮೊಳಕಾಲ್ಮೂರು ಪಟ್ಟಣ ಹಾಗೂ ತಾಲೂಕಿನ ಮಠದಜೋಗಿಹಳ್ಳಿ, ಮುತ್ತಿಗಾರಹಳ್ಳಿ, ಬಿ.ಜಿ.ಕೆರೆ, ದೇವಸಮುದ್ರ, ಯರಪೋತಜೋಗಿಹಳ್ಳಿ, ಸಿದ್ದಯ್ಯನಕೋಟೆ, ವಿಠಲಾಪುರ ಸೇರಿದಂತೆ ಇನ್ನಿತರ ಗ್ರಾಮಗಳ ಜಮೀನುಗಳಲ್ಲಿ ಮೆಣಸಿನಕಾಯಿ, ಬದನೆ ಕಾಯಿ, ಟೊಮ್ಯಾಟೋ ಹಣ್ಣು, ಶೇಂಗಾ, ಮೆಕ್ಕೆಜೋಳ, ಹತ್ತಿ, ರಾಗಿ, ತೊಗರಿ, ಸಜ್ಜೆ ಹಾಗೂ ಇನ್ನಿತರ ಹೂವಿನ ಬೆಳೆಗಳು ಹಾನಿಗೊಳಗಾಗಿ ಹೆಚ್ಚಿನ ಬೆಳೆ ನಷ್ಟ ಸಂಭವಿಸಿದೆ.
ತುತ್ತಾಗಿ ಹೆಚ್ಚಿನ ಬೆಳೆ ಹಾನಿಯಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ತಾಲೂಕಿನಲ್ಲಿ ವರುಣನ ಆರ್ಭಟಕ್ಕೆ ಲಕ್ಷಾಂತರ ರೂ.ಮೌಲ್ಯದ ಬೆಳೆ ಹಾಗೂ ವಾಸದ ಮನೆಗಳು ಭಾಗಶಃ ಹಾನಿಯಾಗಿದ್ದು, ಸಂಬಂಧಿತ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರ ನೀಡಬೇಕೆಂದು ತಾಲೂಕಿನ ಹಾನಿಗೊಳಗಾದ ಸಂತ್ರಸ್ಥರು ಒತ್ತಾಯಿಸಿದ್ದಾರೆ.