ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜನರನ್ನು ಶಾಶ್ವತವಾಗಿ ಬಡವರನ್ನಾಗಿಡುವುದೇ ರಾಷ್ಟ್ರಿಯ ಪಕ್ಷಗಳ ಉದ್ದೇಶವಾಗಿದ್ದು, ಇಂದಿಗೂ ಎಸ್.ಸಿ, ಎಸ್.ಟಿ, ಹಿಂದುಳಿದ ವರ್ಗದ ಜನತೆಯನ್ನು ಕೇವಲ ಮತಬ್ಯಾಂಕ್ ಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.
ನಗರದಲ್ಲಿ ಬುಧವಾರ ಕಚೇರಿಪಾಳ್ಯದ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿ ಸರ್ಕಾರಗಳು ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿವೆ. ಸಂವಿಧಾನವು ಯುವಕರಿಗೆ ಉದ್ಯೋಗ ನೀಡಬೇಕೆಂದು ಹೇಳುತ್ತದೆ. ಆದರೆ ಒಂದೇ ಒಂದು ಕಾನೂನನ್ನು ಸಂವಿಧಾನದ ಆಶಯದಂತೆ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸಂಘ ಪರಿವಾರ, ಸಂವಿಧಾನ ಬದಲಿಸುವ ಮಾತನಾಡಿ, ದೇಶ ದ್ರೋಹಿ ನೀತಿ ಅನುಸರಿಸುತ್ತಿದೆ. ವಿರೋಧ ಪಕ್ಷವಾದ ಕಾಂಗ್ರೆಸ್‌ಪಕ್ಷ ತನ್ನ ಅಧಿಕಾರಾವಧಿಯಲ್ಲಿ ಭಾರತ ಸಂವಿಧಾನವನ್ನೇ ಮೂಲೆಯಲ್ಲಿಟ್ಟು 95 ಬಾರಿ ತಿದ್ದುಪಡಿ ಮಾಡಿ ಸಂವಿಧಾನ ವಿರೋಧಿಯಾಗಿ ನಡೆದುಕೊಂಡು, ಈಗ ಸಂವಿಧಾನ ರಕ್ಷಣೆಯ ನಾಟಕ ಆಡುತ್ತಿರುವ ಕಾಂಗ್ರೆಸ್‌ಬಣ್ಣ ಬಯಲಾಗಿದೆ ಎಂದು ಆಕ್ರೋಶ ವ್ಯಕ್ರಪಡಿಸಿದರು. ತಳಮಟ್ಟದಲ್ಲಿ ದಲಿತರನ್ನೂ ಒಗ್ಗೂಡಿಸುವ ಕೆಲಸವನ್ನ ಕಾರ್ಯಕರ್ತರು ಮಾಡಬೇಕು ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್ ಮಾತನಾಡಿ ಸಂವಿಧಾನ ವಿರೋಧಿಯಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ‘ಮನುಸ್ಮೃತಿ’ ಪ್ರೇರಿತ ನೀತಿಯನ್ನು ಖಂಡಿಸುತ್ತೇವೆ. ವಿದ್ಯೆ, ಆರೋಗ್ಯ, ಅಧಿಕಾರ, ಸಂಪತ್ತು, ಭೂಮಿಯನ್ನು ಸರ್ವರಿಗೂ ಸಮಾನವಾಗಿ ಹಂಚಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಒತ್ತಾಯಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿಗುಂದ ಪಿ. ವೆಂಕಟೇಶ್, ಕಾರ್ಯದರ್ಶಿ ಬಸವರಾಜು, ಜಿಲ್ಲಾಧ್ಯಕ್ಷ ಮಹಾದೇವ, ತಾಲ್ಲೂಕು ಅಧ್ಯಕ್ಷ ನಂಜೇಶ್, ಖಜಾಂಚಿ ದೇವರಾಜು, ನಗರ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಶ್ರೀನಿವಾಸ ಮತ್ತಿತ್ತರರು ಇದ್ದರು.

