ಹೆಚ್‍ಐವಿ, ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೆಚ್‍ಐವಿ, ಏಡ್ಸ್ ಹರಡುವಿಕೆ ತಡೆಗಟ್ಟಲು ಜಾಗೃತಿಯೇ ಮದ್ದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಲ್ಲಿ ಬುಧವಾರ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕದ ವತಿಯಿಂದ ಯುವ ಜನೋತ್ಸವ ಅಂಗವಾಗಿ ಹೆಚ್‍ಐವಿ, ಏಡ್ಸ್ ಜಾಗೃತಿಆಗಿ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಏಡ್ಸ್ ನಿಯಂತ್ರಣಕ್ಕಾಗಿ ಯುವಜನತೆ ಈ ಕುರಿತು ಹೆಚ್ಚಿನ ಅರಿವು ಹೊಂದಿ, ಇತರರಿಗೂ ಅರಿವು ಮೂಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಆರಂಭವಾದ ಮ್ಯಾರಥಾನ್ ಸ್ಪರ್ಧೆಯು ಮುಖ್ಯವೃತ್ತ, ಪ್ರವಾಸಿ ಮಂದಿರ, ಆಸ್ಪತ್ರೆ ವೃತ್ತ ಮಾರ್ಗವಾಗಿ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದವರೆಗೂ ನಡೆಯಿತು.
ಮ್ಯಾರಥಾನ್ ಸ್ಪರ್ಧೆಯಲ್ಲಿ ಪುರುಷರು ವಿಭಾಗದಲ್ಲಿ ಜೋಶುವಾ, ಟಿ.ಕುಶಾಲ್, ಎಂ.ಸಿ.ಸಂಜಯ್ ಹಾಗೂ ಮಹಿಳೆಯರ ವಿಭಾಗದಲ್ಲಿ ಟಿ. ಐಸಿರಿ, ಟಿ.ಬಿಂದು, ಗಗನಲಕ್ಷ್ಮೀ ಅವರು ಕ್ರಮವಾಗಿ ಪ್ರಥಮ (ತಲಾ ರೂ.5000), ದ್ವಿತೀಯ (ತಲಾ ರೂ.3500) ಹಾಗೂ ತೃತೀಯ (ತಲಾ ರೂ. 2500) ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸಿ.ಓ.ಸುಧಾ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಡಿ.ಎಂ.ಅಭಿನವ್, ಜಿಲ್ಲಾ ಮೇಲ್ವಿಚಾರಕ ವಿ.ಅಶೋಕ, ಜಿಲ್ಲಾ ಎನ್.ಎಸ್.ಎಸ್. ನೋಡಲ್ ಅಧಿಕಾರಿ ಡಾ.ಎನ್.ಧನಕೋಟಿ, ದುರ್ಗಾ ರನ್ನರ್ಸ್‍ನ ಅಧ್ಯಕ್ಷೆ ಎಂ. ಸುಷ್ಮಾರಾಣಿ ಚೇತನ್ ಬಾಬು ಹಾಗೂ ಸೌಖ್ಯ ಸಮುದಾಯ ಸಂಸ್ಥೆ, ಸುಚೇತನಾ ನೆಟ್‍ವರ್ಕ್ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಇದ್ದರು.
ಹೆಚ್‍ಐವಿ, ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

