ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಮಾರ್ಟ್ ಮೀಟರ್ ಅಳವಡಿಸಲು ಕರೆದಿದ್ದ ಟೆಂಡರ್ನಲ್ಲಿ 15,568 ಕೋಟಿ ರೂ. ಬೃಹತ್ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಇಆರ್ಸಿ ನಿಯಮಗಳಿಗೆ ಬದ್ಧವಾಗಿರಬೇಕಿದ್ದ ಬೆಸ್ಕಾಂ, ಎಸ್ಕಾಂಗಳು ಮನಬಂದಂತೆ ನಡೆದುಕೊಂಡಿದ್ದಾರೆ. ಕೆಇಆರ್ಸಿ ನಿಯಮಗಳಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದು ಎಲ್ಲೂ ಹೇಳಿಲ್ಲ. ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಬಹುದೇ ಹೊರತು ಖಾಯಂ ಗ್ರಾಹಕರು, ಹೊಸ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡುವಂತಿಲ್ಲ ಎಂದು ಅವರು ಮಾಹಿತಿ ನೀಡಿದರು.
ಸೆಂಟ್ರಲ್ ಇಲೆಕ್ಟ್ರಿಸಿಟಿ ಅಥಾರಿಟಿ ನಿಯಮಾವಳಿ ಪ್ರಕಾರವೂ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲ. ಕೆಟಿಪಿಪಿ ಕಾಯ್ದೆಯಡಿ ಬಿಡ್ ಕೆಪ್ಯಾಸಿಟಿಯನ್ನು ಟೆಂಡರ್ನಲ್ಲಿ ತಿಳಿಸಿಲ್ಲ. ಅದು 6,800 ಕೋಟಿ ಇರಬೇಕಿತ್ತು. ಬಿಡ್ಡಿಂಗ್ ಸಾಮರ್ಥ್ಯ ಇಲ್ಲದಿರುವುದೇ ಮೊದಲ ಹಗರಣ ಎಂದು ಅವರು ಆಕ್ಷೇಪಿಸಿದರು.
ಟೆಂಡರ್ನಲ್ಲಿ ಬರೀ 107 ಕೋಟಿ ಎಂದು ನಮೂದಿಸಿದ್ದಾರೆ. ಕೆಟಿಪಿಪಿ ಕಾಯ್ದೆ ಪ್ರಕಾರ ವ್ಯವಹಾರವು 1,920 ಕೋಟಿ ಇರಬೇಕಾಗಿತ್ತು. ಬ್ಲ್ಯಾಕ್‍ಲಿಸ್ಟ್ ಆದ ಕಂಪನಿಗೆ ಟೆಂಡರ್ ಕೊಡುವುದಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದ್ದರೂ ಉತ್ತರ ಪ್ರದೇಶದಲ್ಲಿ ಬ್ಲ್ಯಾಕ್ ಲಿಸ್ಟ್ ಆದ ಬಿಸಿಐಟಿಎಸ್ ಅನ್ನು ಪರಿಗಣಿಸಿದ್ದಾರೆ ಎಂದು ಅವರು ಆರೋಪಿಸಿದರು.
ಈ ಯೋಜನೆಯ ಅಂದಾಜು ವೆಚ್ಚ 571 ಕೋಟಿ ರೂ. ಎಂದು ತಿಳಿಸಿ ನಂತರ ತಿದ್ದುಪಡಿ ಮಾಡಿದ್ದಾರೆ. ಟೆಂಡರ್ನಲ್ಲಿ ಒಟ್ಟು ಮೊತ್ತ ತಿಳಿಸದೇ ಟೆಂಡರ್ ಕರೆಯಲಾಗಿದೆ ಎಂದು ಮಾಜಿ ಡಿಸಿಎಂ ದೂರಿದರು.
ಕೇಂದ್ರ ಸರ್ಕಾರದ ನಿಯಮಾವಳಿಯನ್ನೂ ಜಾರಿ ಮಾಡಿಲ್ಲ. ಪ್ರಿಬಿಡ್‍ನಲ್ಲಿ ರಾಜಶ್ರೀ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ ಅವರು, ಮೈಸೂರಿನಲ್ಲಿ ಗರಿಷ್ಠ ಸ್ಮಾರ್ಟ್ ಮೀಟರ್ ತಯಾರಾಗುತ್ತದೆ. ಅರ್ಹರನ್ನು ಹೊರಗಿಟ್ಟು ಬರೀ ಫೋನ್ ತಯಾರಕರನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಒಂದು ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಸಿದ ಅನುಭವ ಇರಬೇಕು. ಅದನ್ನು ಬಿಟ್ಟು ಉತ್ಪಾದನೆಯೇ ಮಾಡದ 10 ಲಕ್ಷ ಸಾಮಾನ್ಯ ಮೀಟರ್ ಅಳವಡಿಕೆಯನ್ನೇ ಮಾನದಂಡ ಮಾಡಿದ್ದಾರೆ. ಮೊದಲು ಟ್ರಾನ್ಸ್‌ಫಾರ್ಮರ್, ಫೀಡರ್ಗಳಿಗೆ ಇದನ್ನು ಅಳವಡಿಸಿ ಸಾಗಾಟದಲ್ಲಿ ಆಗುವ ನಷ್ಟವನ್ನು ತಿಳಿಯಬೇಕಿತ್ತು. ಬಳಿಕ ರಾಜ್ಯದ ಗ್ರಾಹಕರಿಗೆ ಇದನ್ನು ಅಳವಡಿಸಬೇಕಿತ್ತು. ಕೇಂದ್ರದ ಆರ್ಡಿಎಸ್ಎಸ್ ಅಡಿ ಸಿಗುವ 3 ಸಾವಿರ ಕೋಟಿ ಹಣವನ್ನು ಬಳಸಿಲ್ಲ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಆರೋಪಿಸಿದರು.