ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಹಾಗೂ ವಿದ್ಯಾರ್ಥಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲೆಯ ಪ್ರತಿಷ್ಠಿತ ಸರ್ಕಾರಿ ವಿಜ್ಞಾನ ಕಾಲೇಜು ಉಳಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಡಿಸಿ ಸರ್ಕಲ್ ಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಕೇಂದ್ರೀಯ ವಿದ್ಯಾಲಯ ಹಾಗೂ ಕಾಲೇಜಿನ ಆವರಣದಲ್ಲಿ ಮಹಿಳಾ ಕಾಲೇಜು ಆರಂಭಿಸುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್ಓ ರಾಜ್ಯ ಕಛೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರು ಮಾತನಾಡಿ, ಚಿತ್ರದುರ್ಗದ ಪ್ರತಿಷ್ಠಿತ ಸರ್ಕಾರಿ ವಿಜ್ಞಾನ ಕಾಲೇಜಿಗೆ 7 ದಶಕಗಳು ಕಳೆದಿವೆ. 1,700ಕ್ಕೂ ಅಧಿಕ ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಮರ್ಪಕ ಕೊಠಡಿ, ಸಿಬ್ಬಂದಿ ಹಾಗೂ ಪ್ರಯೋಗಾಲಯಗಳ ಕೊರತೆಯಿಂದಾಗಿ ಈಗಾಗಲೇ ಎರಡು ಪಾಳಿಯಲ್ಲಿ ಕಾಲೇಜ್ ನಡೆಸಲಾಗುತ್ತಿದೆ.
ದ್ವಿತೀಯ ಹಾಗೂ ಅಂತಿಮ ವರ್ಷದ ತರಗತಿಗಳನ್ನು ಬೆಳಗ್ಗೆ ನಡೆಸಲಾಗುತ್ತಿದೆ. ಪ್ರಥಮ ವರ್ಷದ ತರಗತಿಗಳನ್ನು ಮಧ್ಯಾಹ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇಂತಹ ಪರಿಸ್ಥಿತಿಯಲ್ಲಿ ವಿಜ್ಞಾನ ಕಾಲೇಜಿನ ನೆಲಮಹಡಿಯ ಕೊಠಡಿಗಳನ್ನು ಕೇಂದ್ರಿಯ ವಿದ್ಯಾಲಯಕ್ಕೆ ನೀಡಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಕೊಠಡಿಯಷ್ಟೇ ಅಲ್ಲದೇ ನೆಲ ಮಹಡಿಯಲ್ಲಿನ ಶೌಚಾಲಯ ಕೂಡ ಬಳಕೆಗೆ ದೊರೆಯದಿರುವುದರಿಂದ ವಿದ್ಯಾರ್ಥಿನಿಯರಿಗೆ ತೊಂದರೆ ಉಂಟಾಗುತ್ತದೆ. ಶಾಲಾ ಮಕ್ಕಳ ಪ್ರವೇಶದಿಂದಾಗಿ ಕಾಲೇಜಿನ ಮುಕ್ತ ವಾತಾವರಣಕ್ಕೆ ತೊಂದರೆಯುಂಟಾಗುತ್ತದೆ. ಶಾಲಾ ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಕೂಡ ಕಾಲೇಜಿನ ವಾತಾವರಣ ಮೇಳೈಸುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಕೂಡ ವಿಜ್ಞಾನ ಕಾಲೇಜಿನ ಆವರಣದಲ್ಲಿಯೇ ಸ್ಥಳ ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ. ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿರುವ ವಿಜ್ಞಾನ ಕಾಲೇಜಿಗೆ ವಿಶಾಲ ಆವರಣವು ಅತ್ಯವಶ್ಯಕ. ಮೈದಾನವು ಕಾಲೇಜಿನ ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಬೇಕು. ಜೀವಶಾಸ್ತ್ರದ ಪ್ರಯೋಗಗಳಿಗೆ ಮರ ಸೇರಿದಂತೆ ಅನೇಕ ಸಸ್ಯಗಳ ಅವಶ್ಯಕತೆಯಿದೆ.
ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡವಾಗಬೇಕೆಂಬುದು ಜಿಲ್ಲೆಯ ವಿದ್ಯಾರ್ಥಿಗಳ ಬಹುದಿನದ ಬೇಡಿಕೆ. ಆದರೆ ವಿಜ್ಞಾನ ಕಾಲೇಜಿನ ವಾತಾವರಣಕ್ಕೆ ಧಕ್ಕೆಯುಂಟು ಮಾಡಿ ಹೊಸ ಕಟ್ಟಡ ಒದಗಿಸುವುದು ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಿದಂತಾಗುವುದಿಲ್ಲ.
ಆದ್ದರಿಂದ, ಕೇಂದ್ರೀಯ ವಿದ್ಯಾಲಯ ಹಾಗೂ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಬೇರೆ ಕಡೆ ಸ್ಥಳ ಒದಗಿಸಿ ತುರ್ತಾಗಿ ಸ್ವಂತ ಹಾಗೂ ಸುಸಜ್ಜಿತ ಕಟ್ಟಡ ಒದಗಿಸಬೇಕು ಮತ್ತು ಸರ್ಕಾರಿ ಕಾಲೇಜಿಗೆ ಕಾಂಪೌಂಡ್ ನಿರ್ಮಿಸಿಕೊಡಬೇಕೆಂಬೆಂದು ಎಐಡಿಎಸ್ಓ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಮಾತನಾಡಿ ವಿಜ್ಞಾನ ಕಾಲೇಜಿನಲ್ಲಿ ಕೇಂದ್ರಿಯ ವಿದ್ಯಾಲಯ ಹಾಗೂ ಮಹಿಳಾ ಕಾಲೇಜಿಗೆ ನೀಡಿರುವ ವಿದ್ಯಾರ್ಥಿಗಳ ಆಕ್ಷೇಪಣೆಯನ್ನು ಸೂಕ್ತ ಕ್ರಮಕ್ಕಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ತ್ವರಿತ ಗತಿಯಲ್ಲಿ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಐಡಿಎಸ್ಓ ರಾಜ್ಯ ಕಛೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರು ಅವರು ಎಚ್ಚರಿಕೆ ನೀಡಿದರು.
ಎಐಡಿಎಸ್ಓ ಜಿಲ್ಲಾ ಸಂಚಾಲಕ ಕೆ. ಈರಣ್ಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು .
ಈ ಸಂದರ್ಭದಲ್ಲಿ ಕಾಲೇಜು ಸಮಿತಿ ಸದಸ್ಯರಾದ ಭಾವನಾ, ದಿವ್ಯ, ಸ್ವಪ್ನಾ, ದರ್ಶನ್, ದೇವೇಗೌಡ, ಮನು, ನಿತೀಶ್, ರಂಗಸ್ವಾಮಿ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

