ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಮಾ-24ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ

News Desk
- Advertisement -  - Advertisement - 

​ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ಇತ್ತೀಚಿನ ನೇಮಕಾತಿ ಅಧಿಸೂಚನೆಗಳಲ್ಲಿ ಪರಿಶಿಷ್ಟ ಜಾತಿಯ ಪ್ರವರ್ಗ
ಬಿಮತ್ತು ಸಿಗುಂಪಿಗೆ ಶೂನ್ಯ ಹುದ್ದೆಗಳನ್ನು ಹಂಚಿಕೆ ಮಾಡಿರುವುದನ್ನು ಖಂಡಿಸಿ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ವತಿಯಿಂದ ಮಾರ್ಚ್-24 ರಂದು ಮಂಗಳವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.

​ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಆರ್. ನಾಗೇಂದ್ರ ನಾಯ್ಕ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಒಳ ಮೀಸಲಾತಿ ಜಾರಿಯು ಅವೈಜ್ಞಾನಿಕ ಮತ್ತು ಅನ್ಯಾಯದಾಯಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಜಾರ, ಭೋವಿ, ಕೊರಮ, ಕೊರಚ, ಛಲವಾದಿ, ಚರ್ಮಕಾರ ಹಾಗೂ ಸೂಕ್ಷ್ಮ ಪರಿಶಿಷ್ಟ ಜಾತಿಗಳ ವಿವಿಧ ಸಂಘಟನೆಗಳು ಈ ಹೋರಾಟಕ್ಕೆ ಕೈಜೋಡಿಸಿವೆ.

- Advertisement - 

​ಒಕ್ಕೂಟದ ಪ್ರಮುಖ ಹಕ್ಕೊತ್ತಾಯಗಳು:
​ಹಳೆಯ ಮೀಸಲಾತಿ ಅನ್ವಯ ನೇಮಕಾತಿ: ಶೇಕಡಾ 50ರ ಹಳೆಯ ಮೀಸಲಾತಿ ನಿಯಮದಂತೆ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಯನ್ನು ಕೂಡಲೇ ಮುಂದುವರಿಸಬೇಕು.

​ಏಕಪಕ್ಷೀಯ ನಿರ್ಧಾರಕ್ಕೆ ತಡೆ: ದೇಶವ್ಯಾಪಿ ಜನಗಣತಿಯ ಸಮಗ್ರ ದತ್ತಾಂಶ ಬರುವವರೆಗೆ ಒಳ ಮೀಸಲಾತಿ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಬಾರದು. ಪ್ರಕ್ರಿಯೆ ಆರಂಭಿಸುವ ಮುನ್ನ ಸಮುದಾಯದ ಮುಖಂಡರೊಂದಿಗೆ ಸಮಾಲೋಚನೆ ನಡೆಸಬೇಕು.

- Advertisement - 

​9ನೇ ಷೆಡ್ಯೂಲ್‌ಗೆ ಸೇರ್ಪಡೆ: ಪರಿಶಿಷ್ಟ ಜಾತಿ (17%) ಮತ್ತು ಪಂಗಡಗಳ (7%) ಹೆಚ್ಚುವರಿ ಮೀಸಲಾತಿಯನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಧಾನಿಗಳ ಬಳಿ ನಿಯೋಗ ಕೊಂಡೊಯ್ಯಬೇಕು.

​ದತ್ತಾಂಶ ಬಿಡುಗಡೆ: ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ, ತಾಲ್ಲೂಕುವಾರು ಸಮಗ್ರ ದತ್ತಾಂಶವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು.

​ಆದೇಶಗಳ ಹಿಂಪಡೆಯುವಿಕೆ: ಇತ್ತೀಚಿನ ರೋಸ್ಟರ್ ಹಂಚಿಕೆ ಆದೇಶಗಳು, ಸುತ್ತೋಲೆಗಳು ಮತ್ತು ಪ್ರವರ್ಗ ಎ, ಬಿ, ಸಿ ಎಂದು ನಮೂದಿಸಲಾದ ಜಾತಿ ಪ್ರಮಾಣಪತ್ರಗಳನ್ನು ತಕ್ಷಣ ರದ್ದುಗೊಳಿಸಿ ಹಳೆಯ ಪದ್ಧತಿಯನ್ನೇ ಮುಂದುವರಿಸಬೇಕು.

​SCP/TSP ಅನುದಾನ ಸಂರಕ್ಷಣೆ: ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ಇತರ ಯೋಜನೆಗಳಿಗೆ ವರ್ಗಾಯಿಸುವುದನ್ನು ತಡೆಯಲು ಕಾನೂನು ತಿದ್ದುಪಡಿ ತರಬೇಕು.

​”ಯಾರೋ ಒತ್ತಡಕ್ಕೆ ಮಣಿದು ಅಪ್ರಾಯೋಗಿಕ ಒಳ ಮೀಸಲಾತಿ ವರ್ಗೀಕರಣ ಮಾಡಬಾರದು. ಮೂಲ ಮೀಸಲಾತಿ ಉಳಿಸಿಕೊಳ್ಳಲು ನಡೆಯುತ್ತಿರುವ ಈ ಐತಿಹಾಸಿಕ ಹೋರಾಟದಲ್ಲಿ ರಾಜ್ಯದ ಎಲ್ಲಾ ಗ್ರಾಮ, ತಾಲ್ಲೂಕುಗಳಿಂದ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು,” ಎಂದು ಒಕ್ಕೂಟದ ಸಂಚಾಲಕ ಪ್ರಕಾಶ್ ರಾಮಾನಾಯ್ಕ್ ಕರೆ ನೀಡಿದ್ದಾರೆ.

​ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಪ್ರಮುಖ ಮುಖಂಡರಾದ ಹಾಲ್ಯಾನಾಯ್ಕ್, ರಮೇಶ್ ನಾಯ್ಕ್, ಅನಿಲ್ ನಾಯ್ಕ್, ಗಿರೀಶ್ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
error: Content is protected !!
";