ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಒಳ ಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿ ಆ.೧ ಕ್ಕೆ ಒಂದು ವರ್ಷ ಪೂರೈಸುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಷ್ಟಾನಕ್ಕೆ ತರಲು ಮೀನಾಮೇಷ ಎಣಿಸುತ್ತಿರುವುದರಿಂದ ಆ. ೧ ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ದಲಿತ ಮುಖಂಡ ಚಳ್ಳಕೆರೆ ಶ್ರೀನಿವಾಸ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸದ ಗೋವಿಂದ ಕಾರಜೋಳ ಹಾಗೂ ಮಾಜಿ ಸಂಸದ ಎ.ನಾರಾಯಣಸ್ವಾಮಿರವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ನಾಲ್ಕರಿಂದ ಐದು ಸಾವಿರ ಜನ ಸೇರುವ ನಿರೀಕ್ಷೆಯಿಂದ ಪ್ರತಿ ತಾಲ್ಲೂಕಿನಿಂದಲೂ ಮಾದಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಒಳ ಮೀಸಲಾತಿ ಜಾರಿಗಾಗಿ ಕಳೆದ ೩೫ ವರ್ಷಗಳಿಂದಲೂ ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ಮಾದಿಗರನ್ನು ವಂಚಿಸುತ್ತ ಬರುತ್ತಿರುವುದರಿಂದ ಈ ಬಾರಿ ಒಳ ಮೀಸಲಾತಿ ಜಾರಿಯಾಗುವತನಕ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.
ಜಿ.ಹೆಚ್.ಮೋಹನ್‌ಕುಮಾರ್ ಮಾತನಾಡಿ ಮೂರವರೆ ದಶಕಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಅರೆ ಬೆತ್ತಲೆ ಮೆರವಣಿಗೆ, ಹೋರಾಟ, ಚಳುವಳಿಗಳನ್ನು ಮಾಡಿದ್ದೇವೆ. ಮಾದಿಗರ ಮತಗಳನ್ನು ಪಡೆದಿರುವ ಕಾಂಗ್ರೆಸ್ ಪಕ್ಷ ನಮ್ಮನ್ನು ನಡು ಬೀದಿಯಲ್ಲಿ ನಿಲ್ಲಿಸಿದೆ. ಸುಪ್ರೀಂಕೋರ್ಟ್ ಒಳ ಮೀಸಲಾತಿ ಜಾರಿಗೊಳಿಸುವಂತೆ ತೀರ್ಪು ನೀಡಿ ಆ.೧ ಕ್ಕೆ ಒಂದು ವರ್ಷವಾಗುತ್ತದೆ. ಹಾಗಾಗಿ ಅಂದೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆಂದರು.
೨೦೦೮ ರಲ್ಲಿ ಸದಾಶಿವ ಆಯೋಗವನ್ನು ರಚಿಸಲಾಯಿತು. ಈಗ ದತ್ತಾಂಶ ಸಂಗ್ರಹಕ್ಕಾಗಿ ನಾಗಮೋಹನ್‌ದಾಸ್ ಆಯೋಗವನ್ನು ರಚಿಸಿದೆ. ಇದು ಮಾದಿಗರ ಬೇಡಿಕೆಯಲ್ಲ.
ಆದ್ದರಿಂದ ರಾಜ್ಯ ಸರ್ಕಾರಕ್ಕೆ ಚುರುಕು ಮುಟ್ಟಿಸಲು ಆ.೧ ರಂದು ಬೆಳಿಗ್ಗೆ ೧೦-೩೦ ಕ್ಕೆ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹೊರಡಲಿದೆ. ಆ.೧೧ ರಿಂದ ಆರಂಭಗೊಳ್ಳುವ ಅಧಿವೇಶನದಲ್ಲಿ ಒಳ ಮೀಸಲಾತಿ ಕುರಿತು ವರದಿ ಮಂಡನೆ ಚರ್ಚೆಯಾಗಬೇಕು. ಮುಂದೂಡುವ ಪ್ರಯತ್ನ ಮಾಡಿದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಹೇಳಿದರು.
ಚನ್ನಗಾನಹಳ್ಳಿ ಮಲ್ಲೇಶ್ ಮಾತನಾಡಿ ಮಾದಿಗರ ಮತಗಳನ್ನು ಪಡೆದು ಅಧಿಕಾರದಲ್ಲಿ ಕುಳಿತಿರುವ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದಿರುವುದನ್ನು ವಿರೋಧಿಸಿ ಆ.೧ ರಂದು ಪ್ರತಿಭಟನೆಗೆ ಮುಂದಾಗಿದ್ದೇವೆ. ನಮ್ಮ ಸಮುದಾಯ ಇನ್ನಾದರೂ ಎಚ್ಚೆತ್ತುಕೊಂಡು ಹೋರಾಟಕ್ಕೆ ಬರಬೇಕೆಂದು ವಿನಂತಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಯಣ್ಣ ಮಾತನಾಡುತ್ತ ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಆ.೧ ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತದೆ.
ರಾಜ್ಯ ಸರ್ಕಾರ ಇನ್ನು ದತ್ತಾಂಶ ಸಂಗ್ರಹದ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್, ಪರಶುರಾಂ, ಪ್ರಹ್ಲಾದ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

