ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯ ಸರ್ಕಾರ ಮಾ.೨೭ ರಂದು ನಡೆಸುವ ಸಚಿವ ಸಂಪುಟದಲ್ಲಿ ನ್ಯಾಯಯುತವಾದ ತೀರ್ಮಾನ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮೀಜಿ ಎಚ್ಚರಿಸಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮಾ.೨೫ ರಂದು ಬೆಳಿಗ್ಗೆ ೧೧ ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದೇವೆ. ನಾಗಮೋಹನ್ದಾಸ್ ಆಯೋಗದ ವರದಿ ಸರಿಯಿಲ್ಲ. ಸಮುದಾಯದ ಮುಖಂಡರುಗಳ ಸಭೆ ಕರೆದು ಸಲಹೆ ತೆಗೆದುಕೊಳ್ಳುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದೆವು. ಕೆನೆಪದರಕ್ಕೆ ನ್ಯಾಯ ಸಿಗುವಂತ ವರದಿ ನೀಡಬೇಕಿತ್ತು. ಪೂರ್ವಾಗ್ರಹ ಪೀಡಿತ ಅನ್ಯಾಯವೆಸಗಬೇಕೆಂಬ ಉದ್ದೇಶವಿಟ್ಟುಕೊಂಡು ಬಲಗೈನವರನ್ನು ಗುರಿಯಾಗಿಸಿಕೊಂಡಿದೆ ಎಂದು ಆಪಾದಿಸಿದರು.
ದಲಿತರ ಪರ, ಅಹಿಂದ ನಾಯಕ ಎಂದು ಹೇಳಿಕೊಳ್ಳುವ ನೈತಿಕತೆ ಮುಖ್ಯಮಂತ್ರಿಗಿಲ್ಲ. ಆ.೧, ೨೦೨೪ ರ ಸುಪ್ರೀಂಕೋರ್ಟ್ ತೀರ್ಪನ್ನಿಟ್ಟುಕೊಂಡು ಸಾಮಾಜಿಕ ನ್ಯಾಯ ಕಲ್ಪಿಸಿಕೊಡುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಬಲಗೈ ಒಕ್ಕೂಟದ ಜಿಲ್ಲಾ ಸಂಚಾಲಕ ಛಲವಾದಿ ತಿಪ್ಪೇಸ್ವಾಮಿ ಮಾತನಾಡುತ್ತ ನಾಗಮೋಹನ್ದಾಸ್ ಆಯೋಗ ವರದಿ ಬಂದಾಗಿನಿಂದಲೂ ನಮಗೆ ಅನ್ಯಾಯವಾಗಿದೆ ಎಂದು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಛಲವಾದಿಯ ಕೆಲವರನ್ನು ಎಡಗೈ ಗುಂಪಿಗೆ ಸೇರಿಸಿ ವರದಿಯಲ್ಲಿ ನಮ್ಮ ಸಮುದಾಯದ ಸಂಖ್ಯೆಯನ್ನು ಕಡಿಮೆಗೊಳಿಸಿದೆ. ಜನಸಂಖ್ಯೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿದ್ದೇವೆ. ವರದಿಯಲ್ಲಿ ಮಾತ್ರ ೨೨೦ ಕುಟುಂಬಗಳಿವೆ ಎಂದು ತಪ್ಪು ಮಾಹಿತಿ ನೀಡಿ ನಮಗೆ ಅನ್ಯಾಯವೆಸಗಿರುವುದನ್ನು ಸರಿಪಡಿಸಬೇಕು. ೨೭ ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಹೋರಾಟ ಅನಿವಾರ್ಯವೆಂದರು.
ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಶೇಷಪ್ಪ ಮಾತನಾಡಿ ನಾಗಮೋಹನ್ದಾಸ್ ಆಯೋಗದ ವರದಿ ಅವೈಜ್ಞಾನಿಕ. ತಾರತಮ್ಯದಿಂದ ಕೂಡಿದೆ. ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಛಲವಾದಿಗಳಿದ್ದು, ಕೇವಲ ೨೨೩ ಕುಟುಂಬಗಳಿವೆಯೆಂದು ಸರ್ಕಾರಕ್ಕೆ ತಪ್ಪು ಮಾಹಿತಿ ಕೊಡಲಾಗಿದೆ. ವರದಿಯನ್ನು ಪರಿಶೀಲಿಸಿ ಮತ್ತೊಮ್ಮೆ ಸರ್ಕಾರಕ್ಕೆ ಸಲ್ಲಿಸಬೇಕು. ಬಲಗೈನವರಿಗೆ ಆಘಾತವಾಗಿರುವುದರಿಂದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದರು.
ಛಲವಾದಿ ಮಹಾಸಭಾ ಉಪಾಧ್ಯಕ್ಷ ಓಂಕಾರಮೂರ್ತಿ ಮಾತನಾಡುತ್ತ ಛಲವಾದಿ ಸಮಾಜ ಒಳ ಮೀಸಲಾತಿ ವಿರೋಧಿಗಳಲ್ಲ. ಕೆಲವು ಮುಖಂಡರುಗಳು ಎಡಗೈ ಮತ್ತು ಬಲಗೈ ನಡುವೆ ಒಡಕು ಮೂಡಿಸುವ ಸಂಚು ನಡೆಸುತ್ತಿದ್ದಾರೆ. ರೋಸ್ಟರ್ ಬಿಂದುವಿನಲ್ಲಿ ಆಗಿರುವ ಲೋಪವನ್ನು ಸರಿಪಡಿಸಬೇಕು. ನಾಗಮೋಹನ್ದಾಸ್ ಆಯೋಗ ಅವೈಜ್ಞಾನಿಕವಾಗಿದೆ. ವೈಜ್ಞಾನಿಕವಾಗಿ ವರ್ಗಿಕರಣವಾಗಿಲ್ಲ ಎಂದು ಆಪಾದಿಸಿದರು.
ವೈ.ತಿಪ್ಪೇಸ್ವಾಮಿ, ನ್ಯಾಯವಾದಿ ಹೆಚ್.ಅಣ್ಣಪ್ಪಸ್ವಾಮಿ, ಹೆಚ್.ಹಾಲೇಶಪ್ಪ ಇನ್ನು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

