ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಹಿಂದೂ ಸಂಗಮ ಕಾರ್ಯಕ್ರಮವು ಪ್ರತಿದಿನ ಪ್ರತಿಯೊಂದು ಹಿಂದೂ ಮನೆಯಿಂದಲೇ ಆರಂಭವಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು.
ನಗರದ ಶಿವನಗರದ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ “ಹಿಂದೂ ಸಂಗಮ” ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಹಿಂದೂ ಸನಾತನ ಸಂಸ್ಕೃತಿ ಎತ್ತಿಹಿಡಿಯುವಂತಹ ಉಡುಗೆಗಳನ್ನು, ಆಹಾರ ಪದ್ದತಿಯನ್ನುಹಾಗೂ ಸನಾತನ ಧರ್ಮದ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಆಚರಣೆಗೆ ತರುವ ಮೂಲಕ ಸನಾತನ ಸಂಸ್ಕೃತಿಯನ್ನು ಉಳಿಸಿ-ಬೆಳೆಸಬೇಕೆಂದು ನೆರೆದ ಸಭಿಕರಿಗೆ ಕಿವಿಮಾತು ಹೇಳಿದರು.
ಸನಾತನ ಹಿಂದೂ ಸಂಸ್ಕೃತಿಯ ಮಹಾಕಾವ್ಯಗಳದಂತಹ ರಾಮಾಯಣ-ಮಹಾಭಾರತ-ಭಾಗವತದಂತಹ ಸದ್ಗ್ರಂಥಗಳನ್ನು ಚೆನ್ನಾಗಿ ಅಧ್ಯಯನ ಮಾಡಬೇಕು. ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತಬೇಕು ಎಂದು ತಿಳಿಸಿದರು.
ತೀರ್ಥಹಳ್ಳಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಚಾಲಕರಾದ ರಾಮಚಂದ್ರಜೀ ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಈ ಶುಭ ಸಂದರ್ಭದಲ್ಲಿ ಹಿಂದೂ ಸಂಗಮ ಕಾರ್ಯಕ್ರಮವನ್ನು ಆಯೋಜಿಸಿರುವುದು ಪ್ರತಿಯೊಬ್ಬ ಹಿಂದೂವಿನ ದೇಶಕ್ಕಾಗಿ ಮಾಡಬೇಕಾದ ಕರ್ತವ್ಯವನ್ನು ನೆನಪಿಸುವುದಕ್ಕಾಗಿ, ಹಿಂದೂ ಧರ್ಮಕ್ಕೆ ಆದಿ-ಅಂತ್ಯವಿಲ್ಲ,ಇದು ನಿತ್ಯವಿನೂತನವಾಗಿದ್ದು ಸನಾತನವಾದದ್ದು,ಇಡೀ ವಿಶ್ವಕ್ಕೆ ಭಾರತದ ಕೊಡುಗೆ ಅಪಾರವಾಗಿದ್ದು ಇದನ್ನು ಜಗತ್ತು ಸ್ಮರಿಸಬೇಕುಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಮನೋಹರ್ ಮಾತನಾಡಿ ಹಿಂದೂಗಳು ಜಾತಿಗಳನ್ನು ಮರೆತು ಸಂಘಟಿತರಾಗಬೇಕೆಂದು ಕರೆ ನೀಡಿದರು.
ಆರಂಭದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಮಂಗಳಾರತಿ, ಅನ್ನಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷತ್ ನ ತಾಲೂಕು ಅಧ್ಯಕ್ಷ ಕೆ.ಎಂ.ಯತೀಶ್, ಕುಮಾರ್, ಜಗದಂಬಾ , ಪುಷ್ಪಲತಾ ಸಿದ್ದೇಶ್, ಶಾಂತಮ್ಮ,ಶುಭಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಧರ್ಮಾಭಿಮಾನಿಗಳು ಭಾಗವಹಿಸಿದ್ದರು.

