ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ‘ಮ್ಯಾಕ್ಸ್‘ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಕ್ರಿಸ್ಮಸ್ (ಡಿ.25) ಹಬ್ಬದಂದು ಪ್ರಪಂಚದಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.
ಈಗಾಗಲೇ ಟೀಸರ್, ಟ್ರೇಲರ್, ಹಾಡುಗಳಿಂದ ಹೈಪ್ ಕ್ರಿಯೇಟ್ ಮಾಡಿರುವ ‘ಮ್ಯಾಕ್ಸ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಇದೇ ಭಾನುವಾರ (ಡಿ.22) ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜ್ ಮೈದಾನದಲ್ಲಿ ಸಂಜೆ 6:30ಕ್ಕೆ ನಡೆಯಲಿದೆ. ಲಕ್ಷಾಂತರ ಜನಸಾಗರದ ಮಧ್ಯ ಅದ್ದೂರಿ ವೇದಿಕೆಯಲ್ಲಿ ಈ ಇವೆಂಟ್ ನಡೆಯಲಿದೆ.
ಮನರಂಜನಾ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ನಟರಾದ ಡಾಲಿ ಧನಂಜಯ್, ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್, ಶ್ರೇಯಸ್ ಮಂಜು, ಡಾರ್ಲಿಂಗ್ ಕೃಷ್ಣ, ನವೀನ್ ಶಂಕರ್ ನಿರೂಪ್ ಭಂಡಾರಿ ಹಾಗೂ ನಿರ್ದೇಶಕರಾದ ಎ.ಪಿ. ಅರ್ಜುನ್, ರೊಹೀತ್ ಪದಕಿ, ಅನೂಪ್ ಭಂಡಾರಿ ಭಾಗವಹಿಸಲಿದ್ದಾರೆ. ಜೊತೆಗೆ ‘ಮ್ಯಾಕ್ಸ್’ ಚಿತ್ರದ ಕಲಾವಿದರು, ತಂತ್ರಜ್ಞರು ಭಾಗಿಯಾಗಲಿದ್ದಾರೆ. ವೇದಿಕೆಯಲ್ಲಿ ಬಿಗ್‌ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ವಿನಯ್ ಗೌಡ, ನಟಿ ಶರಣ್ಯ ಶೆಟ್ಟಿ ಮುಂತಾದವರು ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ.
ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ನಾಡಿದ್ದಾರೆ. ಇದೊಂದು ಒಂದೇ ರಾತ್ರಿಯಲ್ಲಿ ನಡೆಯುವ ಎಮೋಷನಲ್ ಆ್ಯಕ್ಷನ್ ಕಥಾ ಹಂದರ ಒಳಗೊಂಡಿರುವ ಚಿತ್ರ. ತಾರಾಗಣದಲ್ಲಿ ಸಂಯುಕ್ತ ಹೊರನಾಡು, ಸುಧಾ ಬೆಳವಾಡಿ, ಕರಿಸುಬ್ಬು, ವಿಜಯ್ ಚಂಡೂರು, ಸುಕೃತ ವಾಗ್ಲೆ, ಉಗ್ರಂ ಮಂಜು ಮುಂತಾದವರು ಇದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ, ಚೇತನ್ ಡಿಸೋಜ ಸಾಹಸ, ಶಿವಕುಮಾರ್ ಕಲಾ ನಿರ್ದೇಶನ, ಗಣೇಶ್ ಬಾಬು ಸಂಕಲನ, ಶ್ರೀರಾಮ್ ಕಾರ್ಯಕಾರಿ ನಿರ್ಮಾಣವಿದೆ.
ಚಿತ್ರವು ಡಿಸೆಂಬರ್ 25ರಂದು ಕರ್ನಾಟಕದಲ್ಲಿ ಕೆ.ಆರ್.ಜಿ. ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ಮುಖೇನ ಬಿಡುಗಡೆಯಾಗುತ್ತಿದೆ.