ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನಂತೆ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರ್ ಗೆ ಹೆಚ್ಚಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಹಠಾತ್ತನೇ ಕರ್ನಾಟಕದ ಸಿಎಂಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿರುವುದು ತೀವ್ರ ಆಶ್ಚರ್ಯ ತಂದಿದೆ. ಆದರೆ ನ್ಯಾಯಧೀಕರಣದ ತೀರ್ಪು ಬಂದಾಗ ಸುಮ್ಮನಿದ್ದ ಮಹಾರಾಷ್ಟ್ರ ಈಗ ಸಿಎಂ ದೇವೇಂದ್ರ ಫಡ್ನವೀಸ್ ಅವರು ನಮ್ಮ ಸಿಎಂ ಸಿದ್ದರಾಮಯ್ಯ ಅವರಿಗೆ ಮೇ 9 ರಂದು ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಆಲಮಟ್ಟಿ ಆಣೆಕಟ್ಟೆ ಎತ್ತರ ಹೆಚ್ಚಳ ಮಾಡಿದರೆ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳು ಪ್ರವಾಹ ಸಮಸ್ಯೆ ಎದುರಿಸುತ್ತವೆ. ಹೀಗಾಗಿ ಈ ತೀರ್ಮಾನ ಮರುಪರಿಶೀಲಿಸಿ ಎಂದು ಮಹಾರಾಷ್ಟ್ರ ಸಿಎಂ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಡಿಸಿಎಂ ಹೇಳಿದರು.
ಆಲಮಟ್ಟಿ ಡ್ಯಾಂ ಎತ್ತರಿಸಿ ಯೋಜನೆ ಜಾರಿ ಮಾಡಿ ರಾಜ್ಯ ಹಾಗೂ ರೈತರ ಹಿತ ಕಾಯಲು ರಾಜ್ಯದ ಎಲ್ಲಾ ಸಂಸದರು, ಕೇಂದ್ರ ಸಚಿವರು ಸಹಕರಿಸಬೇಕು ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ಮಹಾರಾಷ್ಟ್ರ ಸಿಎಂ ಅವರು ನಮ್ಮ ಸಿಎಂಗೆ ಬರೆದಿರುವ ಪತ್ರ ಆಘಾತ ತಂದಿದೆ. ಕಾರಣ ಇದುವರೆಗೂ ಈ ಯೋಜನೆ ವಿಚಾರವಾಗಿ ಮಹಾರಾಷ್ಟ್ರ ಎಂದೂ ಆಕ್ಷೇಪ ಸಲ್ಲಿಸಿರಲಿಲ್ಲ. 2010ರ ತೀರ್ಪಿನ ಬಗ್ಗೆ ಮಹಾರಾಷ್ಟ್ರ ಎಲ್ಲೂ ಪ್ರಶ್ನೆ ಎತ್ತಿರಲಿಲ್ಲ. ಈ ಯೋಜನೆ ಜಾರಿ ಮಾಡಲಿ ಎಂದು ಮಹಾರಾಷ್ಟ್ರ ಕೂಡ ಅಫಿಡವಿಟ್ ಸಲ್ಲಿಸಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಈ ಪತ್ರ ಬರೆದಿದ್ದಾರೆ ಎಂದು ಡಿಸಿಎಂ ತಿಳಿಸಿದರು.
ನ್ಯಾಯಾಧಿಕರಣದಲ್ಲಿ ಅಣೆಕಟ್ಟು ಎತ್ತರಿಸಿ ನಮ್ಮ ಹಕ್ಕಿನ ನೀರು ಬಳಸಿಕೊಳ್ಳಲು ನಮಗೆ ಸಿಕ್ಕಿರುವ ಹಕ್ಕು. ಹೀಗಾಗಿ ನಮ್ಮ ಸಿಎಂ ಸಹ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ ಎಂದು ಡಿಸಿಎಂ ತಿಳಿಸಿದರು.
ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರು, ಕೇಂದ್ರದ ಸಚಿವರು ಈ ವಿಚಾರವಾಗಿ ಸಹಕಾರ ನೀಡಬೇಕು. ಕೇಂದ್ರ ಸಚಿವ ಸೋಮಣ್ಣ ಅವರು ಕೇಂದ್ರ ಜಲಶಕ್ತಿ ಸಚಿವಾಲಯದ ಭಾಗ. ಆಲಮಟ್ಟಿ ಯೋಜನೆ ನಮ್ಮ ರಾಜ್ಯದ ಹಿತ ಕಾಯಬೇಕು. ನಮಗೆ ನೆರೆ ರಾಜ್ಯಗಳ ಜತೆ ತಿಕ್ಕಾಟ ಇಷ್ಟವಿಲ್ಲ. ಈ ಯೋಜನೆ ತಡವಾಗುತ್ತಿರುವುದರಿಂದ ಯೋಜನೆ ವೆಚ್ಚ ವಿಪರೀತ ಏರಿಕೆಯಾಗುತ್ತಿದೆ. ಯೋಜನೆ ಭೂಸ್ವಾಧೀನಕ್ಕೆ 1 ಲಕ್ಷ ಕೋಟಿ ಬೇಕಾಗಿದೆ. ನಮ್ಮ ಪಾಲಿನ ನೀರು ಬಳಸಲು ಈ ಯೋಜನೆ ಮುಖ್ಯ ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.
ಮಹಾರಾಷ್ಟ್ರದಲ್ಲಿ ಪ್ರವಾಹ ಎದುರಾದರೆ ಅದನ್ನು ಅವರು ಆಂತರಿಕವಾಗಿ ಸರಿಪಡಿಸಿಕೊಳ್ಳಲಿ. ನಾವು ಈ ವಿಚಾರವಾಗಿ ಕೇಂದ್ರ ಸಚಿವರು ಹಾಗೂ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಒತ್ತಡ ಹಾಕಬೇಕಿದೆ. ಈ ವಿಚಾರದಲ್ಲಿ ನಾವು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. 2013ರಿಂದ ಈ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಆಗಬೇಕು ಎಂದು ಕಾಯುತ್ತಿದ್ದೇವೆ. ಇನ್ನು ಎಷ್ಟು ದಿನ ಕಾಯಬೇಕು? ಎಂದು ಡಿಸಿಎಂ ಪ್ರಶ್ನಿಸಿದರು.
ರಾಜ್ಯದ ರೈತರ ಹಿತ ಕಾಯಲು ಯಾವಾಗ ಎಲ್ಲಿಗೆ ಕರೆಯುತ್ತೀರೋ ಅಲ್ಲಿಗೆ ಬರಲು ಸರ್ಕಾರ ಸಿದ್ಧವಿದೆ. ಮಹಾರಾಷ್ಟ್ರ ಸಿಎಂ ಹಾಗೂ ಅದಕ್ಕೆ ನಮ್ಮ ಸಿಎಂ ಬರೆಯುವ ಪತ್ರವನ್ನು ಎಲ್ಲಾ ಸಂಸದರಿಗೆ ರವಾನಿಸುತ್ತೇವೆ ಎಂದು ಅವರು ಹೇಳಿದರು.
ನ್ಯಾಯಾಧಿಕರಣ ತೀರ್ಪಿನ ಅನ್ವಯ ನಮ್ಮ ಪಾಲಿನ ನೀರನ್ನು ಪಡೆಯಲು ಆಲಮಟ್ಟಿ ಅಣೆಕಟ್ಟನ್ನು 524 ಮೀಟರ್ ಗೆ ಎತ್ತರಿಸುವ ಯೋಜನೆ ವಿಚಾರವಾಗಿ ನಾನು ಹಾಗೂ ಮುಖ್ಯಮಂತ್ರಿಗಳು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೆವು. ಈ ಬಗ್ಗೆ ಸಭೆ ಕರೆದು ಚರ್ಚೆ ಮಾಡಿ ಅಧಿಸೂಚನೆ ಹೊರಡಿಸಿ ಎಂದು ಮನವಿ ಮಾಡಿದ್ದೆವು ಎಂದು ಶಿವಕುಮಾರ್ ತಿಳಿಸಿದರು.
ಈ ಹಿಂದೆ ಕೇಂದ್ರ ಸಚಿವರು ಸಭೆಯ ದಿನಾಂಕ ನಿಗದಿ ಮಾಡಿದ್ದರು. ಹೀಗಾಗಿ ನಾನು ಸಚಿವರು, ಕಾನೂನು ತಜ್ಞರು ಹಾಗೂ ಆ ಭಾಗದ ಶಾಸಕರ ಜತೆ ಆಂತರಿಕ ಸಭೆ ಮಾಡಿ ಸಲಹೆ ಪಡೆದಿದ್ದೆ. ಸಭೆಗೆ ತೆರಳುವಾಗ ಈ ಸಭೆ ಮುಂದೂಡಲಾಗಿದೆ ಎಂದು ಸಂದೇಶ ಬಂದಿತು. ಯುದ್ಧದ ವಾತಾವರಣ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿರಬಹುದು ಎಂದು ನಾನು ಭಾವಿಸಿದ್ದೆ ಎಂದು ಡಿಸಿಎಂ ತಿಳಿಸಿದರು.