ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಭದ್ರಾ ಮೇಲ್ದಂಡೆ ಯೋಜನೆ ಅಡಿ ಕೈಗೊಂಡಿದ್ದ ಕಾಮಗಾರಿಗೆ ಅಡ್ಡಿ ಮಾಡಿದ್ದ ರೈತರ ಮನವೊಲಿಸಿ ಕಾಮಗಾರಿಗಿದ್ದ ಅಡ್ಡಿ ಆತಂಕ ದೂರ ಮಾಡಿದ ವಿಶ್ವೇಶ್ವರ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯನವರು ಮತ್ತು ಮುಖ್ಯ ಇಂಜಿನಿಯರ್ ಪಕೀರಪ್ಪ ಹೆಚ್ ಲಮಾಣಿ ಹಾಗೂ ಅಧೀಕ್ಷಕ ಇಂಜಿನಿಯರ್ ಹರೀಶ್ ಹಾಗೂ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಾಗರಾಜ್ ಎ. ಪರಶುರಾಂಪುರ ಮತ್ತು ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಶೇಖರಯ್ಯ ಹಾಗೂ ಜನಾರ್ಧನ್ ಹಾಗೂ ಇನ್ನಿತರ ಅಧಿಕಾರಿಗಳ ತಂಡ ಮೇಲ್ದಂಡೆ ಕಾಮಗಾರಿಯನ್ನು ಚಳ್ಳಕೆರೆ ಭಾಗದಲ್ಲಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಸುಮಾರು ಮೂರ್ನಾಲ್ಕು ಕಡೆ ಕಾಮಗಾರಿಗೆ ಹಿನ್ನೆಡೆಯಾಗಿದ್ದ ಜಾಗಗಳನ್ನು ವೀಕ್ಷಣೆ ಮಾಡಿ ಸಲಹೆ ಸೂಚನೆಗಳನ್ನು ಕೊಟ್ಟು ಅತಿ ತುರ್ತಾಗಿ ಕಾಮಗಾರಿ ಮುಗಿಸುವಂತೆ ಜಿವಿಪಿಆರ್ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.
ಚಳ್ಳಕೆರೆ ಭಾಗದಲ್ಲಿ ಸುಮಾರು 54 ಕಿಲೋಮೀಟರ್ ಪೈಪ್ಲೈನ್ ಹಾದು ಹೋಗುತ್ತಿದ್ದು ಈಗಾಗಲೇ 53 ಕಿಲೋ ಮೀಟರ್ ಕಾಮಗಾರಿ ಪೂರ್ಣಗೊಂಡಿದ್ದು ಬಾಲೇನಹಳ್ಳಿ, ರೆಡ್ಡಿ ಹಳ್ಳಿ ಮತ್ತು ಮಾದೇಪುರ ಭಾಗದಲ್ಲಿ ಮೂರ್ನಾಲ್ಕು ರೈತರ ಜಮೀನಿನಲ್ಲಿ ಸ್ವಲ್ಪ ಕಾಮಗಾರಿಗೆ ಅಡಚಣೆಯಾಗಿದ್ದು ರೆಡ್ಡಿಹಳ್ಳಿ ರೈತ ಜಗಳೂರಪ್ಪ ಅಧಿಕಾರಿಗಳೊಡನೆ ಮತ್ತು ರೈತ ನಾಯಕರೊಡನೆ ಮಾತನಾಡಿ ನನ್ನ ಜಮೀನಿನಲ್ಲಿ ಯಾವುದೇ ಕಾರಣಕ್ಕೂ ಕಾಮಗಾರಿಗೆ ಅಡಚಣೆ ಮಾಡುವುದಿಲ್ಲ ಆದರೆ ಅಧಿಕಾರಿಗಳು ಮುಖತಹ ಭೇಟಿ ಮಾಡಿ ಕಾಮಗಾರಿಯ ಬಗ್ಗೆ ಮನವರಿಕೆ ಮಾಡಿದ್ದರೆ ಮತ್ತು ಹಾದುಹೋಗುವ ಜಮೀನಿಗೆ ಇಂತಿಷ್ಟು ಪರಿಹಾರ ಸಿಗುತ್ತದೆ ಎಂದು ಮುಖತಹ ಭೇಟಿ ಮಾಡಿ ಮನವರಿಕೆ ಮಾಡಿದ್ದರೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೆ ಎಂದು ತಿಳಿಸಿ ನನ್ನೊಬ್ಬನಿಂದ ಕಾಮಗಾರಿ ವಿಳಂಬವಾಗುವುದು ಬೇಡ ಎಂದು ತಿಳಿಸಿ ನಾಳೆಯಿಂದಲೇ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಒಪ್ಪಿಗೆ ನೀಡಿದರು.
ಅದೇ ರೀತಿ ಮಹದೇವಪುರ ಗ್ರಾಮದ ವಿರೂಪಾಕ್ಷಯ್ಯ ಜಮೀನಿನಲ್ಲಿ ಹಾದು ಹೋಗುವ ಪೈಪ್ ಲೈನ್ ಕಾಮಗಾರಿ ವಿಳಂಬವಾಗಿದ್ದು ಸುಮಾರು ಎರಡು-ಮೂರು ಸಲ ವ್ಯವಸ್ಥಾಪಕ ನಿರ್ದೇಶಕರು ಭೇಟಿ ಕೊಡುವ ಸಂದರ್ಭದಲ್ಲಿ ರೈತನು ಹಾಜರಿರದೆ ಇರುವುದನ್ನು ಕಂಡ ಸಣ್ಣ ಚಿತ್ತಯ್ಯನವರು ಮಹದೇಪುರ ಗ್ರಾಮ ಪಂಚಾಯಿತಿಗೆ ಭೇಟಿಕೊಟ್ಟು ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರುಗಳಿಗೆ ಹಾಗೂ ಪಿಡಿಓ ಗೆ ಮನವಿ ಮಾಡಿ ವಿರೂಪಾಕ್ಷಯ್ಯ ಒಬ್ಬನಿಂದ ಸುಮಾರು 21 ಕೆರೆಗಳ ನೀರು ತುಂಬಿಸುವ ಕಾಮಗಾರಿ ತುಂಬಾ ವಿಳಂಬವಾಗುತ್ತಿದ್ದು ಸಾಮಾಜಿಕ ಕಳಕಳಿಯನ್ನು ತಾವುಗಳು ಪ್ರದರ್ಶನ ಮಾಡಿ ನಿಮ್ಮ ಊರಿನ ರೈತ ವಿರೂಪಾಕ್ಷಯ್ಯನವರಿಗೆ ಮನವರಿಕೆ ಮಾಡಿ ನೀವೇ ಆ ರೈತನ ಜವಾಬ್ದಾರಿ ತೆಗೆದುಕೊಂಡು ಆತನನ್ನು ಒಪ್ಪಿಸಿ ಕಾಮಗಾರಿಗೆ ಅವಕಾಶ ಕಲ್ಪಿಸಬೇಕೆಂಬ ಜವಾಬ್ದಾರಿಯನ್ನು ಪಂಚಾಯಿತಿಯವರಿಗೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಯು ರೈತರ ಕನಸಿನ ಕೂಸಾಗಿದ್ದು ಈ ಯೋಜನೆ ತ್ವರಿತ ಅನುಷ್ಠಾನಗೊಳಿಸಲು ಜಲ ಸಂಪನ್ಮೂಲ ಇಲಾಖೆ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಾಗೂ ಚಿತ್ರದುರ್ಗದ ಉಸ್ತುವಾರಿ ಸಚಿವ ಡಿ ಸುಧಾಕರ್, ಚಳ್ಳಕೆರೆ ಕ್ಷೇತ್ರದ ರಘುಮೂರ್ತಿ ಅನೇಕ ಸಲ ಈ ವಿಚಾರವಾಗಿ ಸಭೆಗಳನ್ನು ನಡೆಸಿದ್ದು ಅತಿ ವೇಗವಾಗಿ ಕಾಮಗಾರಿ ಮುಗಿಸುವಂತೆ ಹೇಳಿರುವುದು ಅವರ ಬದ್ಧತೆ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ತಿಳಿಸಿದರು.
ಇದೇ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಭೇಟಿ ಕೊಟ್ಟ ನಿಮ್ಮ ಗ್ರಾಮ ಪಂಚಾಯಿತಿಗೆ ನಮ್ಮ ನೆನಪಿರಲಿ ಎಂದು ಐವತ್ತು ಸಾವಿರ ರೂಗಳ ಪುಸ್ತಕಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಧ್ಯಕ್ಷರು ನಿಮ್ಮಂತ ದಕ್ಷ ಪ್ರಾಮಾಣಿಕ ಅಧಿಕಾರಿಗಳು ಮತ್ತು ರೈತ ಪರ ಕಾಳಜಿ ಉಳ್ಳವರಾಗಿದ್ದರೆ ಹಳ್ಳಿಯ ರೈತರು ಉದ್ದಾರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಾಗರಾಜ್ ಎ ಪರಶುರಾಮಪುರ ಮಾತನಾಡಿ ಭದ್ರಾ ಮೇಲ್ದಂಡೆ ಯೋಜನೆಯು ಅನೇಕ ರೈತರ ಹೋರಾಟ ಸಂಘಟನೆಗಳ ಹೋರಾಟ ಮತ್ತು ಅನೇಕ ರಾಜಕೀಯ ನೇತಾರರ ಹೋರಾಟದ ಮತ್ತು ಮಠಮಾನ್ಯಗಳ ಹೋರಾಟಗಳ ಫಲದಿಂದಾಗಿ, ಮಾಧ್ಯಮದವರ ಸಂಘಟನಾತ್ಮಕ ಹೋರಾಟದ ಫಲವಾಗಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಆಗಮಿಸಿರುವ ದಕ್ಷ ಅಧಿಕಾರಿಗಳ ಪ್ರಯತ್ನದ ಫಲವಾಗಿ ಈ ದಿನ ಕೆರೆಗಳು ತುಂಬುವ ಕಾಲ ಹತ್ತಿರವಾಗಿದೆ ಎಂದು ತಿಳಿಸಿದರು. ಸಂತೋಷದ ವಿಚಾರ ಏನೆಂದರೆ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಅವರು ಈ ಭಾಗದ ರೈತರ ಮಗ ಆಗಿರುವುದರಿಂದ ಕಾಮಗಾರಿಗೆ ಹೆಚ್ಚಿನ ವೇಗ ದೊರಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕವಿತಾ ರಾಜೇಶ್, ಉಪಾಧ್ಯಕ್ಷ ಓಬಳೇಶ್, ಮಾಜಿ ಅಧ್ಯಕ್ಷ ತ್ಯಾಗರಾಜ್ ಮತ್ತು ಪಂಚಾಯತ್ ಸದಸ್ಯರು, ರೈತ ಮುಖಂಡರು ಹಾಜರಿದ್ದರು.

