ಫೆಬ್ರವರಿ 17 ಮತ್ತು 18ರಂದು ಮೀಡಿಯಾ ಫೆಸ್ಟ್-ಜಡಿಯಪ್ಪ ಗೆದ್ಲಗಟ್ಟಿ

News Desk

ಚಂದ್ರವಳ್ಳಿ ನ್ಯೂಸ್, ಕಲಬುರಗಿ/ ಬೆಂಗಳೂರು:
ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನ ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದಿಂದ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 17 ಮತ್ತು 18 ರಂದು ಎರಡು ದಿನಗಳ ಕಾಲ ಭವಿಷ್ಯದಲ್ಲಿ ಪತ್ರಕರ್ತರಾಗುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಮೀಡಿಯಾ ಫೆಸ್ಟ್2025 ಕಾರ್ಯಕ್ರಮ ಆಯೋಜಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಲಬುರಗಿ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ತಿಳಿಸಿದರು.

ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ, ಶರಣ ಬಸವ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಇವರ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಕಾರ್ಯಾಗಾರ, ನುರಿತ ಪತ್ರಕರ್ತರಿಂದ ಗೋಷ್ಠಿ, ಸ್ಪರ್ಧೆಗಳು ನಡೆಯಲಿವೆ. ಕಲಬುರಗಿ ಮತ್ತು ಬೆಳಗಾವಿ ವಿಭಾಗದ ವಿಶ್ವವಿದ್ಯಾಲಯ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪತ್ರಿಕೋದ್ಯಮ ವಿಭಾಗದ ಸುಮಾರು 200 ವಿದ್ಯಾರ್ಥಿಗಳು ಮತ್ತು ಕಾಲೇಜಿನ ಪ್ರಾಧ್ಯಾಪಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ:
ಶರಣಬಸವ ವಿಶ್ವವಿದ್ಯಾಲಯದ ಪತಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಪದವಿ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಮಾಧ್ಯಮೋತ್ಸವದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸಲಾಗುತ್ತಿದೆ. ಭವಿಷ್ಯದ ಸ್ಪರ್ಧಾತ್ಮಕ ಪತ್ರಕರ್ತರಲ್ಲಿ ಅತ್ಯುತ್ತಮರನ್ನು ಹೊರತರಲು ಹತ್ತು ಹಲವು ಸ್ಪರ್ಧೆಗಳನ್ನು ವಿನ್ಯಾಸಗೊಳಿಸಿದ್ದು, ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದ ವಿವಿಧ ಸ್ಥಳಗಳಲ್ಲಿ ಸ್ಪರ್ಧೆ ನಡೆಯಲಿವೆ. ಕಾರ್ಯಕ್ರಮಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ವಿ.ವಿ.ಯಲ್ಲಿ ವಸತಿ, ಊಟದ ವ್ಯವಸ್ಥೆ ಮಾಡಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ. ಪ್ರವೇಶ ಸಂಪೂರ್ಣ ಉಚಿತ ಇರಲಿದೆ. ಇನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯು ವಿದ್ಯಾರ್ಥಿಗಳ ನೋಂದಣಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ವೈಯಕ್ತಿಕ ಸ್ಪರ್ಧೆಗಳು ಮತ್ತು ಗುಂಪು ಸ್ಪರ್ಧೆಗಳು ಎಂದು ಎರಡು ವಿಭಾಗಗಳಾಗಿ ಸ್ಪರ್ಧೆಗಳನ್ನು ವಿಂಗಡಿಸಲಾಗಿದೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ನೇರ ಪತ್ರಿಕಾಗೋಷ್ಠಿ ವರದಿ ಮಾಡುವಿಕೆ, ಪಿಟಿಸಿ ಮತ್ತು ಟಿವಿ ವರದಿ ಮಾಡುವಿಕೆ, ಸ್ಪಾಟ್ ಛಾಯಾಗ್ರಹಣ, ರೇಡಿಯೋ ಜಾಕಿ, ನುಡಿಚಿತ್ರ, ಜಾಹೀರಾತು ಬರವಣಿಗೆ, ಸಾಮಾಜಿಕ ಮಾಧ್ಯಮದ ವರದಿ ಮಾಡುವಿಕೆ ಮತ್ತು ಮುಖ್ಯಾಂಶಗಳನ್ನು ಬರೆಯುವ ಕಲೆ ಸೇರಿವೆ. ಗುಂಪು ಸ್ಪರ್ಧೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ರಸಪ್ರಶ್ನೆ, “ನಮ್ಮೂರ ಭಾಷೆವರವಾ? ಶಾಪವಾ?” ಚರ್ಚಾ ಸ್ಪರ್ಧೆ ಸೇರಿದೆ ಎಂದರು.

ಕಲ್ಯಾಣ ಕರ್ನಾಟಕ ಮಾಧ್ಯಮೋತ್ಸವದ ಮತ್ತೊಂದು ವೈಶಿಷ್ಟ್ಯವೆಂದರೆ ಉದಯೋನ್ಮುಖ ಪತ್ರಕರ್ತರ ಕೌಶಲ್ಯಗಳನ್ನು ಉತ್ತಮಗೊಳಿಸುವ ಎರಡು ಕಾರ್ಯಾಗಾರಗಳು ಹಮ್ಮಿಕೊಳ್ಳಲಾಗಿದೆ. ಮೊದಲ ಕಾರ್ಯಾಗಾರದಲ್ಲಿ ಹಿರಿಯ ಪತ್ರಕರ್ತ ಹಾಗೂ ನಟ, ನಿರ್ದೇಶಕ ಮತ್ತು ಆಲ್ಮಾ ಮೀಡಿಯಾದ ಸಂಸ್ಥಾಪಕರಾದ ಗೌರೀಶ್ ಅಕ್ಕಿ, ಮಾಧ್ಯಮದ ಸ್ಪರ್ಧಾತ್ಮಕ ಜಗತ್ತನ್ನು ಪ್ರವೇಶಿಸುವ ಹಾಗೂ ಸವಾಲುಗಳನ್ನು ಎದುರಿಸಲು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ಸಿದ್ಧಪಡಿಸುವ ಕುರಿತು ಮಾತನಾಡಲಿದ್ದಾರೆ. ಎರಡನೇ ಕಾರ್ಯಾಗಾರದಲ್ಲಿ ನಕಲಿ ಸುದ್ದಿಗಳನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಹಿರಿಯ ಪತ್ರಕರ್ತೆ ಹಾಗೂ ಪ್ರಾಧ್ಯಾಪಕಿ ಪ್ರೊ.ಕಾಂಚನ ಕೌರ್ ಮಾತನಾಡಲಿದ್ದಾರೆ ಎಂದು ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದ ಟಿ.ವಿ.ಶಿವಾನಂದನ್ ಅವರು, ಎರಡು ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮಗಳು ಸಹ ನಡೆಯಲಿವೆ ಎಂದರು.

ಫೆಬ್ರವರಿ 17 ರಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಮೀಡಿಯಾ ಫೆಸ್ಟ್ ಉದ್ಘಾಟಿಸಲಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿ ಮತ್ತು ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ, ಕೊಪ್ಪಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಬಿ. ಕೆ. ರವಿ, ಶರಣಬಸವ ವಿಶ್ವವಿದ್ಯಾಲಯದ ಉಪ ಕುಲಪತಿ  ಡಾ. ಅನಿಲ್ಕುಮಾರ್ ಬಿಡವೆ, ಗುಲಬರ್ಗಾ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಶ್ರೀರಾಮುಲು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಭವಾನಿ ಸಿಂಗ್, ಕಲಬುರಗಿ ಘಟಕದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಮತ್ತು ಇನ್ನಿತರ ಗಣ್ಯರು ಮಾಧ್ಯಮೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಫೆಬ್ರವರಿ 18 ರಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕಲಬುರಗಿಯ ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ, ಕಲಬುರಗಿಯ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮತ್ತು ಇತರ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ ಎಂದು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಭವಾನಿ ಸಿಂಗ್, ಕಲಬುರಗಿ ಘಟಕದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಇದ್ದರು.

 

Share This Article
error: Content is protected !!
";