ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಶೇಷ ಚೇತನ ಮಕ್ಕಳಿಗಾಗಿ ಪ್ರತಿ ತಾಲ್ಲೂಕು ಹಂತದಲ್ಲಿ ವೈದ್ಯಕೀಯ ಶಿಬಿರ ಆಯೋಜಿಸಿ, ವೈದ್ಯರು ಮಕ್ಕಳಿಗೆ ಶಿಫಾರಸ್ಸು ಮಾಡಿದ ಸಾಧನ ಸಲಕರಣೆಗಳನ್ನ ವಿತರಿಸಲು ಕ್ರಮ ಕೈಗೊಳ್ಳುವಂತೆ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಕಾರ್ಯಲಯದಲ್ಲಿ ಸೋಮವಾರ 2024-25 ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಮಧ್ಯವರ್ತನೆಯಡಿಯಲ್ಲಿ ವಿಶೇಷ ಅಗತ್ಯತೆ ಇರುವ ಮಕ್ಕಳಿಗೆ ಬೇಕಾಗುವ ಸಾಧನ ಸಲಕರಣೆಗಳನ್ನು ಒದಗಿಸುವ ಕುರಿತು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೈದ್ಯರು ಮಕ್ಕಳಿಗೆ ಶಿಫಾರಸ್ಸು ಮಾಡಿದ ಸಾಧನ ಸಲಕರಣೆಗಳನ್ನ ಅಡಿಪ್ ಯೋಜನೆ ಅಡಿಯಲ್ಲಿ ಒದಗಿಸಲಾಗುತ್ತಿದೆ. ಸಾಧನ ಸಲಕರಣೆಗಳನ್ನು ಒಟ್ಟು ವೆಚ್ಚದ ಶೇ.40 ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಹಾಗೂ ಶೇ.60 ನ್ನು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ವತಿಯಿಂದ ಖರೀದಿಸಲು ಕ್ರಮವಹಿಸಬೇಕು.
ದಿನಾಂಕ.06.10.2024 ರಿಂದ 07.11.2024 ರವರೆಗೆ ತಾಲ್ಲೂಕು ಮಟ್ಟದ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ ಯಶಸ್ವಿಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಅರ್.ಮಂಜುನಾಥ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಜಿಲ್ಲಾ ಶಸ್ತçಚಿಕಿತ್ಸಕ ಡಾ.ರವೀಂದ್ರ, ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ವೆಂಕಟೇಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.