ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ವಿಕಾಸಸೌಧದಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯದಿಂದ ಗಾಯತ್ರಿ ಜಲಾಶಯ ಹಾಗೂ ಇತರೆ 15 ಕೆರೆಗಳು ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಗೆ 0.50 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡುವ ಸಂಬಂಧ ಸಭೆ ನಡೆಸಿ ಚರ್ಚಿಸಲಾಯಿತು.
ವಾಣಿ ವಿಲಾಸ ಸಾಗರ ನಾಲೆಗಳ ಆಧುನೀಕರಣ ಹಾಗೂ ವಿ.ವಿ. ಸಾಗರ ಜಲಾಶಯದ ಪುನಃಶ್ಚೇತನ ಮತ್ತು ಅಭಿವೃದ್ಧಿ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ವ್ಯಾಪ್ತಿಯಲ್ಲಿ ಬರುವ 38,322 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಹಾಗೂ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿ 15 ಕೆರೆಗಳಿಗೆ ನೀರು ತುಂಬಿಸುವ ಬ್ಲಾಕ್-5, ಬ್ಲಾಕ್-6 ಮತ್ತು ಬ್ಲಾಕ್-7 ರ ಕಾಮಗಾರಿಗಳಿಗೆ 28.11.2023 ರಂದು ಜರುಗಿದ 1ನೇ ಪರಿಶೀಲನಾ ಸಭೆಯಲ್ಲಿ ಅನುಮೋದನೆ ನೀಡಿ, ಸದರಿ ಕಾಮಗಾರಿಗಳನ್ನು ಕೈಗೊಳ್ಳಲು ಮಂಡಳಿ ಸಭೆಗೆ ಶಿಫಾರಸ್ಸು ಮಾಡಲಾಗಿದೆ.
ಸದರಿ 03 ಬ್ಲಾಕ್ ಕಾಮಗಾರಿಗಳಿಗೆ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಿ ಟೆಂಡರ್ ಕರೆಯುವ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಹಿರಿಯೂರು ತಾಲ್ಲೂಕು ಹೂವಿನಹೊಳೆ ಗ್ರಾಮದ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಅಂದಾಜು ಪಟ್ಟಿ ತಯಾರಿಸುವ ಪ್ರಗತಿ ಹಂತದಲ್ಲಿದೆ.
ಹಿರಿಯೂರು ತಾಲ್ಲೂಕು ಕೂನಿಕೆರೆ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಅಂದಾಜು ಪಟ್ಟಿ ತಯಾರಿಸುವ ಪ್ರಗತಿ ಹಂತದಲ್ಲಿದ್ದು ಈ ಬಗ್ಗೆ ಚರ್ಚಿಸಿ ಅಧಿಕಾರಿಗಳಿಗೆ ಶೀರ್ಘವಾಗಿ ಕೈಗೆತ್ತಿಕೊಳ್ಳುವಂತೆ ಸಚಿವರು ಸೂಚನೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಇರುವ ತೊಡಕುಗಳಾದ ಅಜ್ಜಂಪುರ ತಾಲ್ಲೂಕಿನ ಚಿತ್ರದುರ್ಗ ಶಾಖಾ ಕಾಲುವೆ ಪ್ಯಾಕೇಜ್-4ರ ಕಾಮಗಾರಿಯ ಅಬ್ಬಿನಹೊಳಲು ಹಾಗೂ ತುಮಕೂರು ಶಾಖಾ ಕಾಲುವೆ ಪ್ಯಾಕೇಜ್-1ರ ಕಾಮಗಾರಿಯ ಕಾಟಿಂಗೆರೆ, ಚಿನ್ನಾಪುರ ಮತ್ತು ಸೊಲ್ಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ
ಸಂತ್ರಸ್ತ ರೈತರು ಹೆಚ್ಚುವರಿ ಭೂ ಪರಿಹಾರ ಕೋರಿ ಕಾಮಗಾರಿಗಳಿಗೆ ಅಡ್ಡಿ ಪಡಿಸುತ್ತಿರುವುದರಿಂದ ಉಂಟಾಗಿರುವ ಭೂ ಸ್ವಾಧೀನ ಸಮಸ್ಯೆ ನಿವಾರಿಸುವ ಕುರಿತು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮತ್ತು ಕಡೂರು ವಿಧಾನಸಭಾ ಕ್ಷೇತ್ರದ ಶಾಸಕರುಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಶಾಸಕರುಗಳು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ಸಂತ್ರಸ್ತ ರೈತರೊಂದಿಗೆ ಸಭೆ ಏರ್ಪಡಿಸಲು ಹಾಗೂ ಸಭೆಯ ದಿನಾಂಕವನ್ನು ನಿಗಧಿಪಡಿಸುವಂತೆ ಉಪ ಮುಖ್ಯ ಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಇವರಿಗೆ ಪತ್ರ ಮುಖೇನ ಕೋರಿಕೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಲಮಾಣಿ, ಅಧೀಕ್ಷಕ ಇಂಜಿನಿಯರ್ ಮಧುಕುಮಾರ್, ಕಾರ್ಯಪಾಲಕ ಇಂಜಿನಿಯರ್ ಬಾರಿಕರ ಚಂದ್ರಪ್ಪ ಇತರೆ ಅಧಿಕಾರಿಗಳು ಹಾಜರಿದ್ದರು.

