ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಚುಕ್ಕಾಣಿ ಹಿಡಿದಿರುವವರು ದಿನಕ್ಕೊಂದು ಸುಳ್ಳು, ತಿಂಗಳಿಗೊಂದು ದರ ಏರಿಕೆ. ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರ್ಕಾರದ ಆಡಳಿತದ ವೈಖರಿ ಇದು ಎಂದು ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕಸದ ಮೇಲೆಯೂ ಕಾಂಗ್ರೆಸ್ ಕಂಪನಿ ಸರ್ಕಾರ ಸೆಸ್ ವಿಧಿಸುತ್ತಿದೆ ಎಂದು ಅವರು ದೂರಿದ್ದಾರೆ.
ಲೂಟಿಗಿಳಿದ ಸರ್ಕಾರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರಸ್ ಕಂಪನಿ ಸರ್ಕಾರ ಲೂಟಿಗಿಳಿದಿದೆ. ನಿತ್ಯ ದರ ಏರಿಕೆ ಮಾಡುವ ಮೂಲಕ ಕನ್ನಡಿಗರ ಮೇಲೆ ದರ ಏರಿಕೆ ದಂಡಯಾತ್ರೆ ಎಂದು ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಸಮೃದ್ಧ ಕರ್ನಾಟಕವನ್ನು ಬರ್ಬಾದ್ ಮಾಡಿರುವ ಕಾಂಗ್ರೆಸ್ ಕಂಪನಿ ಸರ್ಕಾರ ದರಬೀಜಾಸುರ ರೂಪ ತಳೆದು ಜನರ ರಕ್ತ ಹೀರುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ನೀರು, ಮೆಟ್ರೋ ರೈಲು, ಕೆಎಸ್ಆರ್ಟಿಸಿ ಬಸ್ ಟಿಕೆಟ್, ಹಾಲು (3 ಸಲ ದರ ಏರಿಕೆ), ವಿದ್ಯುತ್, ಮುದ್ರಾಂಕ, ಮಾರ್ಗದರ್ಶಿ ಮೌಲ್ಯ, ಅಬಕಾರಿ ಸುಂಕ, ಪಹಣಿ ಏರಿಕೆ ಮಾಡಿದಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಗಳ ಶುಲ್ಕ, ಶವದ ಮರಣೋತ್ತರ ಪರೀಕ್ಷೆ ಶುಲ್ಕ, ವೈದ್ಯಕೀಯ ಪ್ರಮಾಣ ಪತ್ರದ ದರ, ಲ್ಯಾಬ್ನಲ್ಲಿ ಪರೀಕ್ಷೆ ಶುಲ್ಕ, ವೃತ್ತಿಪರ ತೆರಿಗೆ, ಬಿತ್ತನೆ ಬೀಜಗಳ ದರವನ್ನು ಏರಿಕೆ ಮಾಡಿದೆ. ಇದು ದರಬೀಜಾಸುರ ಕಾಂಗ್ರೆಸ್ ಸರ್ಕಾರ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಕಾಂಗ್ರೆಸ್ ಕಂಪನಿ ಸರ್ಕಾರ ಜನರ ಮೇಲೆ ಇಂದಿನಿಂದ (ಏಪ್ರಿಲ್ 1ರಿಂದ) ಕಸದ ಮೇಲೂ ಸೆಸ್ ಹೇರುತ್ತಿದೆ ದರಬೀಜಾಸುರ ಸರ್ಕಾರ. ಕಸದ ಹೆಸರಿನಲ್ಲಿ ಕೋಟಿ ಕೋಟಿ ಸುಲಿಗೆ ಗುರಿ ಎಂದು ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಬೆಲೆ ದುಬಾರಿ?: ದಿನ ನಿತ್ಯ ಬಳಕೆ ಮಾಡುವಂತ ಹಾಲು, ಮೊಸರು, ವಿದ್ಯುತ್ ದರ, ಟೋಲ್ ಶುಲ್ಕ, ಕಸ ಸಂಗ್ರಹದ ಮೇಲಿನ ಸೆಸ್ ಸೇರಿದಂತೆ ಜನ ಬಳಕೆಯ ವಸ್ತುಗಳು ಹಾಗೂ ಸೇವೆಗಳ ದರ ಇಂದಿನಿಂದ ಮತ್ತಷ್ಟು ಹೆಚ್ಚಳವಾಗಲಿದೆ. ಇಂದಿನಿಂದ ಹಾಲು ಹಾಗೂ ಮೊಸರಿನ ದರ ಲೀಟರ್ಗೆ 4 ರೂಪಾಯಿ ಏರಿಕೆಯಾಗಲಿದೆ. ಕೆಎಂಎಫ್ ಮನವಿಯಂತೆ ರಾಜ್ಯ ಸರ್ಕಾರ ಹಾಲಿನ ದರ ಏರಿಕೆಗೆ ಸಹಮತ ನೀಡಿದೆ.
ಹಾಲಿನ ದರ ಹೆಚ್ಚಳದ ಜೊತೆಯಲ್ಲೇ ಇಂದಿನಿಂದ ವಿದ್ಯುತ್ ದರದ ಹೆಚ್ಚಳವೂ ಜಾರಿಗೆ ಬರಲಿದೆ. ಗೃಹ ಜ್ಯೋತಿ ಯೋಜನೆ ಹೊರತುಪಡಿಸಿ ಉಳಿದ ಗ್ರಾಹಕರಿಗೆ ಒಂದು ಯುನಿಟ್ ವಿದ್ಯುತ್ ದರ 36 ಪೈಸೆಯಷ್ಟು ಹೆಚ್ಚಳವಾಗಲಿದೆ.
ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳಲ್ಲಿ ಹಾಕಲಾಗಿರುವ ಟೋಲ್ ಗಳಲ್ಲೂ ದರ ಏರಿಕೆ ಆಗಲಿದೆ. ಸಾರಿಗೆ ಕ್ಷೇತ್ರದಲ್ಲಿ ವಾಹನಗಳ ಟೋಲ್ ದರವೂ ಇಂದಿನಿಂದ ಹೆಚ್ಚಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿಯಂತೆ ಟೋಲ್ ಶುಲ್ಕ ದರ ಶೇ. 3 ರಿಂದ 5 ರಷ್ಟು ಏರಿಕೆಯಾಗಲಿದೆ ಎಂದು ತಿಳಿದು ಬಂದಿದೆ.