ಚಂದ್ರವಳ್ಳಿ ನ್ಯೂಸ್, ನವದೆಹಲಿ:
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮುಡಾದ ಹಲವು ಕಡತಗಳನ್ನು ಕದ್ದೊಯ್ದು ಸುಟ್ಟುಹಾಕಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಕಳಂಕ ಬಂದಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಅವರು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭೈರತಿ ಸುರೇಶ್ ಸಚಿವರಾಗಿರಲು ನೈತಿಕತೆ ಇಲ್ಲ ಎಂದು ದೂರಿದರು.
ಯಡಿಯೂರಪ್ಪ ಅವರ ಪತ್ನಿ ಮೈತ್ರಾ ದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಕೈವಾಡವಿದ್ದು ಅವರು ಕೇಂದ್ರ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬೈರತಿ ಸುರೇಶ್ ಆರೋಪಿಸಿದ್ದರು.
ಫೈಲ್ ಸುಟ್ಟು ಆರೋಪದಿಂದ ವಿಮುಖರಾಗಲು ನನ್ನ ವಿರುದ್ಧ ಆಧಾರ ರಹಿತ ಆರೋಪ ಹಾಗೂ ಅನಗತ್ಯ ಆರೋಪಗಳನ್ನು ಮಾಡುತ್ತಿರುವ ಸುರೇಶ್, ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ತಿಳಿಸಿದರು.
ಬೈರತಿ ಸುರೇಶ್ ಅವರಂತಹ ರಾಜಕಾರಣಿಯನ್ನು ಆಪ್ತರನ್ನಾಗಿ ಇಟ್ಟುಕೊಂಡಿರುವುದಕ್ಕೆ ಸಿದ್ದರಾಮಯ್ಯ ಅವರಿಗೆ ಇಂಥ ಪರಿಸ್ಥಿತಿ ಬಂದಿದೆ. ಶಕುನಿಯು ಕೌರವರ ಅವನತಿಗೆ ಹೇಗೆ ಬೆಂಬಲಿಸಿದನು ಎಂಬುದನ್ನು ಮುಡಾ ಪರಿಸ್ಥಿಗೆ ಹೋಲಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗೆ ಆಪ್ತರಾಗಿರುವಂತಹ ಇಂತಹ ರಾಜಕೀಯ ನಾಯಕರು ಸಿದ್ದರಾಮಯ್ಯ ಅವರನ್ನು ಸುತ್ತುವರೆದಿದ್ದಾರೆ ಎಂದು ಕಿಡಿಕಾರಿದರು. ಫೈಲ್ ಸುಟ್ಟಿರುವುದು ಲಾಭಕ್ಕಾಗಿ ಅಲ್ಲ. ನಿಮ್ಮನ್ನು ಕೆಳಗಿಳಿಸಲು ಕುತಂತ್ರ ಮಾಡಲಾಗಿದೆ ಎಂದು ಆರೋಪಿಸಿದರು.
ಸತ್ಯ ಹೇಳಿದಾಗ ಜನ ಕೋಪಗೊಳ್ಳುತ್ತಾರೆ. ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತಾರೆ ಎಂದು ಪುನರುಚ್ಚರಿಸಿದ ಕರಂದ್ಲಾಜೆ, ಭಯದಿಂದ ಸಚಿವ ಸುರೇಶ್ ಇಂತಹ ಆರೋಪ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಸಾವಿಗೆ ಸುರೇಶ್ ಕಾರಣವೇ ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಆಸ್ತಿ ದೋಚಲು ಸಿಎಂ ಜೀವನದಲ್ಲಿ ಸುರೇಶ್ ಬಂದಿದ್ದಾರೆ. ರಾಕೇಶ್ ಸಾವಿನ ಹಿಂದೆ ಸುರೇಶ್ ಅವರ ಕೈವಾಡವಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ರಾಜಕೀಯ ವ್ಯಕ್ತಿಗಳು ಮಹಿಳೆಯರ ವಿರುದ್ಧ ಸುಳ್ಳು ಆರೋಪ ಮಾಡದೆ ರಾಜಕೀಯವನ್ನು ಯಥಾಸ್ಥಿತಿಯಲ್ಲಿ ಎದುರಿಸಬೇಕು. ಓಡಿಹೋಗುವ ಅಥವಾ ರಾಜೀ ಮಾಡಿಕೊಳ್ಳುವ ರಾಜಕಾರಣಿ ನಾನಲ್ಲ. ಪ್ರಸ್ತುತ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸುರೇಶ್ ಅವರನ್ನು ಅಲ್ಲಿಂದ ಓಡಿಸುವ ಜವಾಬ್ದಾರಿ ತನ್ನ ಮೇಲಿದೆ ಎಂದು ಶೋಭಾ ಕರಂದ್ಲಾಜೆ ಅವರು ಪ್ರತಿಜ್ಞೆ ಮಾಡಿದರು.