ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ನಗರದ ತುರುವನೂರು ರಸ್ತೆಯ ಬೆಸ್ಕಾಂ ಹೊಸ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಾರ್ಯ ಮತ್ತು ಪಾಲನಾ ಘಟಕ 03 ಹಾಗೂ ಘಟಕ-04 ರ ಕಚೇರಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿ ಹೆಚ್ಚಿನ ಅನುದಾನವನ್ನು ಇಂಧನ ಇಲಾಖೆಗೆ ಒದಗಿಸಿದ್ದಾರೆ. ಗೃಹಜ್ಯೋತಿ ಜತೆಗೆ ಕೃಷಿ ಸಂಬಂಧ ರೈತರಿಗೆ ಉಚಿತವಾಗಿ 19 ಸಾವಿರ ಕೋಟಿ ರೂ. ಸಬ್ಸಿಡಿಯನ್ನು ಸಹ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ಪಾರದರ್ಶಕವಾಗಿ ಗುಣಮಟ್ಟದ ವಿದ್ಯುತ್‍ಚ್ಛಕ್ತಿಗಾಗಿ ಕಳಪೆ ಮಟ್ಟದ ವಿದ್ಯುತ್ ಪರಿವರ್ತಕಗಳ ಬದಲಾವಣೆ, ಉಪಕೇಂದ್ರಗಳ ಹೆಚ್ಚಳ, ಹೆಚ್‍ಟಿ ಲೈನ್ ಹಾಗೂ ಎಲ್‍ಟಿ ಲೈನ್ ಸುಧಾರಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು, ಇಂಧನ ಇಲಾಖೆ ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದು, ಈ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ 4,19,7722 ಗೃಹಪಯೋಗಿ ಗ್ರಾಹಕರಿದ್ದು, ಅದರಲ್ಲಿ ಒಟ್ಟು 3,75,160 ಗ್ರಾಹಕರು ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳಾಗಿದ್ದಾರೆ ಹಾಗೂ 3,75,160 ಗ್ರಾಹಕರ ವಿದ್ಯುತ್ ಬಳಕೆ ಸಹಾಯಧನ ಮೊತ್ತ ರೂ.1513.79 ಲಕ್ಷಗಳಷ್ಟು ಏಪ್ರಿಲ್-2025ರ ಮಾಹೆಯಲ್ಲಿ ಸರ್ಕಾರದಿಂದ ಬಿಡುಗಡೆಯಾಗಿದ್ದು, ಈ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ 3,75,160 ಗ್ರಾಹಕರ ಸಹಾಯಧನ ಮೊತ್ತ ಒಟ್ಟು ರೂ.29275.39 ಲಕ್ಷಗಳಷ್ಟು ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ಹೇಳಿದರು.
ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ, ನೂತನವಾಗಿ ನಿರ್ಮಿಸಿರುವ ಕಾರ್ಯ ಮತ್ತು ಪಾಲನಾ ಘಟಕ 03 ಮತ್ತು 04 ಕಚೇರಿ ಕಟ್ಟಡ ಸಾರ್ವಜನಿಕರ ಸೇವೆಗೆ ಕಾರ್ಯಾರಂಭಗೊಂಡಿದೆ. ಇಂಧನ ಇಲಾಖೆಯ ಗೃಹಜ್ಯೋತಿ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ರೂ.50 ಲಕ್ಷ ವೆಚ್ಚದಲ್ಲಿ ಬೆಸ್ಕಾಂ ಕಾರ್ಯ ಮತ್ತು ಪಾಲನಾ ಘಟಕ 03 ಮತ್ತು 04 ನಿರ್ಮಿಸಲಾಗಿದ್ದು, ಇದರಿಂದ ಸುಮಾರು 17 ಗ್ರಾಮ ಪಂಚಾಯಿತಿಗಳಿಗೆ ಸೇವೆ ದೊರೆಯಲಿದೆ. ಬಹಳ ಸುಸಜ್ಜಿತವಾಗಿ ಕಚೇರಿ ನಿರ್ಮಾಣವಾಗಿದ್ದು, ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುವಂತಾಗಬೇಕು ಎಂದು ಹೇಳಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಗೃಹಜ್ಯೋತಿ ಯೋಜನೆಯಡಿ ಸುಮಾರು 1.20 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದು, ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಪ್ರತಿ ತಿಂಗಳು ರೂ.4.92 ಕೋಟಿ ಹಣ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು.
ಬೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ತಿಮ್ಮರಾಯ ಮಾತನಾಡಿ, ರೂ.50 ಲಕ್ಷ ವೆಚ್ಚದ 15 ಚದರ ವಿಸ್ತೀರ್ಣದ ಈ ಕಟ್ಟಡವು ಕಾರ್ಯ ಮತ್ತು ಪಾಲನಾ ಘಟಕ 3 ಮತ್ತು 4 ಎರಡು ಘಟಕ ಕಚೇರಿಗಳನ್ನು ಒಳಗೊಂಡಿರುತ್ತದೆ. ಈ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್‍ರವರ ಕೊಠಡಿ, ಸಿಬ್ಬಂದಿಗಳಿಗೆ ಪ್ರತ್ಯೇಕ ಪಾರ್ಟಿಷಿಯನ್, ಉಗ್ರಾಣ ಕೊಠಡಿ ಹಾಗೂ ಪುರುಷರ ಮತ್ತು ಮಹಿಳೆಯ ಶೌಚಾಲಯಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.
ಚಿತ್ರದುರ್ಗ ಬೆಸ್ಕಾಂ ಹೊಸ ಕಾಲೋನಿಯಲ್ಲಿ ಲೈನ್‍ಮ್ಯಾನ್‍ಗಳಿಗಾಗಿ ವಾಸದ ಗೃಹಗಳ ನಿರ್ಮಾಣಕ್ಕಾಗಿ ಒಟ್ಟು 7.60 ಕೋಟಿ ವೆಚ್ಚದಲ್ಲಿ ಹಾಗೂ ಅಧಿಕಾರಿಗಳಿಗಾಗಿ ರೂ.1.53 ಕೋಟಿ ವೆಚ್ಚದಲ್ಲಿ ಈಗಾಗಲೇ ಶಂಕುಸ್ಥಾಪನೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಚಿತ್ರದುರ್ಗದಲ್ಲಿ ನಗರ ಮತ್ತು ಗ್ರಾಮೀಣ ಉಪವಿಭಾಗಗಳಿದ್ದು, 2.14 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 3.15 ಲಕ್ಷಕ್ಕೂ ಹೆಚ್ಚು ನೀರಾವರಿ ಪಂಪ್‍ಸೆಟ್ ಹೊಂದಿದ ಗ್ರಾಹಕರಿದ್ದು, ಚಿತ್ರದುರ್ಗ ತಾಲ್ಲೂಕಿನಲ್ಲಿ 35,148 ಐಪಿ ಸೆಟ್ ಗ್ರಾಹಕರಿಗೆ ನಾವು ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರ ಜಿಲ್ಲಾ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷರಾದ ಡಿ.ಎನ್.ಮೈಲಾರಪ್ಪ, ಖಾದಿ ರಮೇಶ್, ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.