ವಿತರಕರ ಕ್ಷೇಮ ನಿಧಿಗೆ 10 ಕೋಟಿ ನೀಡಲು ಸಿಎಂಗೆ ಮನವಿ-ಸಚಿವ ಡಿ.ಸುಧಾಕರ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪತ್ರಿಕಾ ವಿತರಕರದು ಅತ್ಯಂತ ಶ್ರೇಷ್ಟವಾದ ಕೆಲಸ. ರಾಜ್ಯ, ದೇಶ, ವಿಶ್ವದ ಮೂಲೆಯಲ್ಲಿ ಆಗಿರುವ ಪ್ರಮಖ ಘಟನಾವಳಿಗಳನ್ನು ಸೂರ್ಯ ಹುಟ್ಟುವುದಕ್ಕೂ ಮೊದಲು  ಓದುಗನ ಮನೆಯಂಗಳಕ್ಕೆ ತಲುಪಿಸುವ ಕೆಲಸವನ್ನು ವಿತರಕರು ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಇಲ್ಲಿನ ಮುರುಘಾಮಠದ ಅನುಭವ ಮಂಟಪದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 4ನೇ ರಾಜ್ಯ ಮಟ್ಟದ ವಿತರಕರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

 ಮಳೆ, ಚಳಿ, ಗಾಳಿ ಲೆಕ್ಕಿಸದೆ ತಮ್ಮ ವೃತ್ತಿಯಲ್ಲಿ ನಿರತರಾಗಿದ್ದಾರೆ. ಬಹಳಷ್ಟು ಜನರಿಗೆ ಮುಂಜಾನೆ ಪತ್ರಿಕೆ ಓದದಿದ್ದರೆ ಕಾಫಿಯೇ ರುಚಿಸದು. ಹಾಗಾಗಿ ಪತ್ರಿಕೆ ಬಂತಾ ಅಂತ ದಾರಿ ಕಾದು ಕುಳಿತಿರುತ್ತಾರೆ. ಅಷ್ಟರ ಮಟ್ಟಿಗೆ ಮುಂಜಾನೆಯ ಚಡಪಡಿಕೆ ನಿವಾರಿಸುವ ಕೆಲಸವನ್ನು ವಿತರಕರು ಮಾಡುತ್ತಿದ್ದಾರೆ ಎಂದು ಹೇಳಿದರು.

    ಪತ್ರಿಕೆ ವಿತರಣೆಯಲ್ಲಿ ಎರಡು ವ್ಯವಸ್ಥೆಯಿದೆ. ಏಜೆಂಟರು ಮಾಧ್ಯಮ  ಕಂಪನಿಗಳ ಜೊತೆ ಡಿಪಾಜಿಟ್ ಕಟ್ಟಿ ನಗರ ಪ್ರದೇಶದಲ್ಲಿ ಪತ್ರಿಕೆ ವಿತರಕರ ಜವಾಬ್ದಾರಿ ಹೊತ್ತರೆ, ಮನೆ ಮನೆಗೂ ಪತ್ರಿಕೆ ಹಂಚುವ ಹುಡುಗರ ಮತ್ತೊಂದು ದಂಡು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ. ಮಧ್ಯರಾತ್ರಿ ವ್ಯಾನ್ ಕಾದು  ಅದರಲ್ಲಿನ ಬಂಡಲ್ ಇಳಿಸಿಕೊಂಡು, ಎಣಿಸಿ ಓದುಗನ ಮನೆಗೆ ತಲುಪಿಸಲಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

      ಸರ್ಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಿಗಳಿಗೆ ಇರುವಂತೆ ವಾರಕ್ಕೊಂದು ರಜೆ ಇವರಿಗಿರುವುದಿಲ್ಲ. ಪ್ರಮುಖ ಹಬ್ಬಗಳಂದು ಮಾಧ್ಯಮ ಸಂಸ್ಥೆಗಳು ರಜೆ ಘೋಷಣೆ ಮಾಡಿದಾಗ ಮಾತ್ರ ಇವರಿಗೆ ರಜೆ ಸಿಗುತ್ತದೆ. ನನಗೆ ತಿಳಿದ ಮಟ್ಟಿಗೆ ಯುಗಾದಿ, ಗಣೇಶ, ದಸರಾ ಹಾಗೂ ದೀಪಾವಳಿ ಹಬ್ಬದಂದು ಮಾತ್ರ ಇವರಿಗೆ ರಜೆ ಇರಬೇಕು. ಗಣೇಶನ ಹಬ್ಬಕ್ಕೆ ಸಿಕ್ಕ ಒಂದು ದಿನದ ರಜೆ ಬಳಸಿಕೊಂಡು ರಾಜ್ಯ ಸಮ್ಮೇಳನ ನಡೆಸುತ್ತಿದ್ದಾರೆ. ಗಣೇಶನ ಹಬ್ಬಕ್ಕೆ ರಜೆ ಇದ್ದ ಕಾರಣ ಪತ್ರಿಕೆ ವಿತರಣೆ ಕಾರ್ಯಕ್ಕೆ ಬಿಡುವು ಸಿಕ್ಕಿದೆ ಎಂದರು.

    ಹಿಂದೆಲ್ಲ ನಾವು ಓದುವಾಗ ಅನೇಕರು ಮುಂಜಾನೆ ಸೈಕಲ್ ತುಳಿದು ಪತ್ರಿಕೆ ಹಾಕಿ ಅದರಲ್ಲಿಯೇ  ಸಿಗುವ ಅಲ್ಪ ಹಣದಲ್ಲಿಯೇ  ವಿದ್ಯಾಭ್ಯಾಸದ ಖರ್ಚಿಗೆ ಬಳಸಿಕೊಳ್ಳುತ್ತಿದ್ದರು. ಮನೆ ಮನೆಗೆ ಪತ್ರಿಕೆ ಹಾಕಿ  ಓದಿ ವಿದ್ಯಾವಂತರಾದ ಹಾಗೂ ಸದೃಢ ಸಮಾಜ ಕಟ್ಟಿದ ಅನೇಕರು ನಮ್ಮ ಮುಂದೆ ಇದ್ದಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮನೆ ಮನೆಗೆ  ಪತ್ರಿಕೆ ಹಂಚುತ್ತಿದ್ದರು ಎಂಬುದು ಗೊತ್ತಿರುವಂತಹದ್ದೆ ಆಗಿದೆ. ಪತ್ರಿಕೆ ಹಂಚಿ ವಿಧಾನಸಭೆ ಪ್ರವೇಶಿಸಿ ಜನಪ್ರತಿನಿಧಿಗಳು ಇದ್ದಾರೆ. ಕೋಲಾರ ಭಾಗದಲ್ಲಿ ಮುನಿಯಪ್ಪ, ಹೊಳಲ್ಕೆರೆ ಶಾಸಕ ಚಂದ್ರಪ್ಪ ಕೂಡಾ ಒಂದು ಕಾಲದಲ್ಲಿ ಪತ್ರಿಕಾ ವಿತರಕರಾಗಿದ್ದರು.

       ಪತ್ರಿಕಾ ವಿತರಕರು ಅಸಂಘಟಿತ ಸಮುದಾಯವಾಗಿದ್ದಾರೆ.ರಾಜ್ಯದಲ್ಲಿ ಸುಮಾರು 40 ಸಾವಿರ ಪತ್ರಿಕಾ ವಿತರಕರು ಇದ್ದಾರೆ. ಇದರಲ್ಲಿ ಬೆಂಗಳೂರಿನಲ್ಲಿಯೇ 120 ಸ್ಥಳಗಳಲ್ಲಿ ಸುಮಾರು 6500 ಜನ ಪತ್ರಿಕೆಯನ್ನು ವಿತರಣೆ ಮಾಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ  500 ಮಂದಿ ಇದ್ದಾರೆ ಎನ್ನುವುದ ಓದಿ ತಿಳಿದಿದ್ದೇನೆ.

     ಇದೇ ಮೊದಲ ಬಾರಿಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾ ವಿತರಕರ ನೆರವಿಗೆ ಧಾವಿಸಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಇ-ಶ್ರಮ್ ಅಡಿ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕರ್ತವ್ಯ ನಿರ್ವಹಿಸುವ ವೇಳೆ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಪರಿಹಾರ ಲಭ್ಯವಾಗಲಿದೆ. ಕೋವಿಡ್ ಸಮಯದಲ್ಲಿ ವಿತರಕರು   ಹಲವಾರು ತೊಂದರೆಗಳನ್ನು ಅನುಭವಿಸಿದ್ದು, ಹಲವರು ಅಗಲಿದ್ದಾರೆ. ಈ ಸಂಗತಿ ಪ್ರಧಾನವಾಗಿ ಇರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವಿಗೆ ಧಾವಿಸಿದ್ದಾರೆ. ವಿತರಕರ ಕ್ಷೇಮಾಭಿವೃದ್ದಿಗೆ ಕನಿಷ್ಠ ಹತ್ತು ಕೋಟಿ ರುಪಾಯಿ ಹಣ ಮೀಸಲಿಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುವೆ ಎಂದು ಭರವಸೆ ನೀಡಿದರು.

- Advertisement -  - Advertisement - 
Share This Article
error: Content is protected !!
";