ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಜಿಲ್ಲಾ ಉಸ್ತುವಾರಿ ಸಚಿವರು ಇಡೀ ಜಿಲ್ಲೆಯವರ ಪರವಾಗಿ ಕೆಲಸ ಮಾಡಬೇಕು. ಅವರು ಹಿರಿಯೂರಿಗೆ ಮಾತ್ರ ಸಚಿವರೇ? ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಖಾರವಾಗಿ ಪ್ರಶ್ನಿಸಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿ ಸಾಗರದ ಹಿನ್ನೀರಿನ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆ ಅರಿಯಲು ಉಸ್ತುವಾರಿ ಸಚಿವರು ಈವರೆಗೂ ಬಂದಿಲ್ಲ. ಇಡೀ ಜಿಲ್ಲೆಗೆ ಕಾರ್ಯಕ್ರಮ ರೂಪಿಸಬೇಕು. ಅವರು ತಾಲ್ಲೂಕಿನ ರೈತರ ಸಂಕಷ್ಟ ಅರಿಯಲು ವಿಫಲರಾಗಿದ್ದಾರೆ. ವಿವಿ ಸಾಗರ ಡ್ಯಾಂ ನಿರ್ಮಾಣಕ್ಕಾಗಿ ಹೊಸದುರ್ಗ ತಾಲ್ಲೂಕಿನ ರೈತರು 25 ಸಾವಿರ ಎಕರೆ ಭೂಮಿ ನೀಡಿದ್ದಾರೆ. ಸಚಿವರು ಎಲ್ಲರ ಸಮಸ್ಯೆ ಅರಿತು ಅವರ ಪರವಾಗಿ ಕರ್ತವ್ಯ ನಿರ್ವಹಿಸಬೇಕು. ಕೇವಲ ಒಂದು ತಾಲ್ಲೂಕಿಗೆ ಸೀಮಿತವಾಗಿರಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ತಮ್ಮ ಸ್ಥಾನಕ್ಕೆ ತಕ್ಕುದಾಗಿ ಇರಬೇಕು.
ತಾಲ್ಲೂಕಿನ ಹಿನ್ನೀರಿನ ರೈತರು ಸಂಕಷ್ಟ ಅರಿಯಲು ಭೇಟಿ ನೀಡುವಂತೆ ಈ ಹಿಂದೆಯೇ ಆಹ್ವಾನಿಸಲಾಗಿತ್ತು. ಅವರೂ ಬಂದಿಲ್ಲ. ರೈತರೆಂದರೆ ಎಲ್ಲರೂ ಒಂದೇ ಎಂದು ಗೋವಿಂದಪ್ಪ ತಾಕೀತು ಮಾಡಿದರು.
ರೈತರ ಬಾಳೆ, ತೆಂಗು ಅಡಿಕೆ ಸೇರಿದಂತೆ ಹತ್ತಾರು ಸಾವಿರ ಎಕರೆ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು ರೈತರು ಅತೀವ ಸಂಕಟ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಮಸ್ಯೆ ಪರಿಹಾರಕ್ಕೆ ನೀರವಾರಿ ತಜ್ಞರನ್ನು ಕಳಿಸಿ, ಪರಿಹಾರ ಒದಗಿಸಿ, ಸಂಕಷ್ಟ ನಿವಾರಣೆ ಮಾಡಬೇಕು. ವಿವಿ ಸಾಗರದ ಗಡಿ ಭಾಗ ಗುರುತಿಸಲು ಕಂದಾಯ ಹಾಗೂ ಸರ್ವೆ ಇಲಾಖೆಗಳು ಆಧುನಿಕ ತಂತ್ರಜ್ಞಾನ ಬಳಸಿ ಗಡಿ ರೇಖೆ ಗುರುತಿಸಲು ಪರಿಶೀಲನೆ ಮಾಡಬೇಕು. ಅದರ ವೆಚ್ಚ ತುಂಬುವ ಕಾರ್ಯವಾಗಬೇಕು. ೧೩೦ ಅಡಿಗಿಂತ ಹೆಚ್ಚಿನ ನೀರು ಬಂದರೆ ಅನಾಹುತ ಮಾಡುತ್ತದೆ. ಅನೇಕ ಭೂಮಿ ಮುಳುಗಡೆ ಆಗಿ ತೊಂದರೆ ಆಗುತ್ತದೆ. ತಜ್ಞರ ಅಭಿಪ್ರಾಯ ಸಂಗ್ರಹ ಮಾಡಿ 130 ಅಡಿಗಿಂತ ಹೆಚ್ಚಿನ ನೀರನ್ನು ನಿಲ್ಲದಂತೆ ಆಚೆ ಕಳಿಸಲು ಪ್ರಯತ್ನ ಮಾಡಬೇಕು ಎಂದು ಶಾಸಕ ಗೋವಿಂದಪ್ಪ ತಿಳಿಸಿದರು.
ಹಿರಿಯೂರು ರೈತ ಸಂಘದವರು ಈ ಭಾಗಕ್ಕೆ ಇನ್ನೂ ಬಂದಿಲ್ಲ, ಈಗಾಲಾದರೂ ಒಮ್ಮೆ ಭೇಟಿ ನೀಡಬೇಕು. ನೀವು ಸುಖದಲ್ಲಿದ್ದೀರಿ, ಸಂಕಷ್ಟದಲ್ಲಿರುವ ರೈತರ ಬಗ್ಗೆ ಯೋಚಿಸಿ ದಿನಾಂಕ ಸೂಚಿಸಿ, ನಿಷ್ಪಕ್ಷಪಾತವಾಗಿ ಚರ್ಚಿಸಿ ಗಡಿರೇಖೆ ಗುರುತಿಸಲಿ ಎಂದು ಶಾಸಕರು ಆಗ್ರಹ ಮಾಡಿದರು.
ಲಕ್ಕಿಹಳ್ಳಿ, ಮತ್ತೊಡು, ಕಾರೇಹಳ್ಳಿ, ಗುಡ್ಡದನೇರಲಕೆರೆ, ಅತ್ತಿಮಗ್ಗೆ ಗಂಜಿಗೆರೆ ರೈತರ ಭೂಮಿ ಮತ್ತು ಕೆರೆಗಳಿಗೆ ನೀರು ತುಂಬಿಸಬೇಕು. ಶೀಘ್ರ ಪರಿಹಾರ ಹುಡುಕಬೇಕು ಅಥವಾ ರೈತರು ಸಂಕಷ್ಟ ಬಗೆಹರಿಸಬೇಕು. ವಿವಿ ಸಾಗರದ ತೇವಾಂಶದ ನೀರು ಕೊಳವೆ ಬಾವಿಯಲ್ಲಿ ಬರುತ್ತಿಲ್ಲ ಎಂದು ಶಾಸಕ ಗೋವಿಂದಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗೋ.ತಿಪ್ಪೇಶ್, ಮಹಮ್ಮದ್ ಇಸ್ಮಾಯಿಲ್, ಕಾರೇಹಳ್ಳಿ ಬಸವರಾಜ್, ಕೆ.ಸಿ.ನಿಂಗಪ್ಪ, ದೀಪಕಾ ಸತೀಶ್, ಹನುಮನಾಯ್ಕ್ ಸೇರಿದಂತೆ ಮತ್ತಿತರರು ಉಪಸ್ಧಿತರಿದ್ದರು.
“ವಿವಿ ಸಾಗರದ ಡ್ಯಾಂ ನೀರಿನ ಮಟ್ಟ 130 ಅಡಿಯೇ ಇರಲಿ ಈ ಬಗ್ಗೆ ತಕರಾರು ಇಲ್ಲ. ತಾಂತ್ರಿಕ ತಜ್ಞರ ಸಲಹೆ ಪಡೆದು ಗಡಿ ನಿರ್ಣಯಿಸಬೇಕು. ವಿವಿ ಸಾಗರ ಜಲಾಶಯಕ್ಕೆ ಕೇವಲ ವೇದಾವತಿಯಿಂದ ನೀರು ಬರುತ್ತಿಲ್ಲ, ಹೊಳಲ್ಕೆರೆ, ಗಂಜಿಗೆರೆ, ಅರಸೀಕೆರೆ, ಚಿಕ್ಕನಾಯಕನಹಳ್ಳಿ ಹೀಗೆ ಹಲವೆಡೆಯಿಂದ ನೀರು ಹರಿದು ಬರುತ್ತದೆ. ಈ ಬಗ್ಗೆ ಮಾಪನ ಕಾರ್ಯ ಆಗಬೇಕು”.
ಬಿ.ಜಿ.ಗೋವಿಂದಪ್ಪ,ಶಾಸಕರು, ಹೊಸದುರ್ಗ ವಿಧಾನ ಸಭಾ ಕ್ಷೇತ್ರ.